

Patna: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ( Bihar Election) ಸಂಬಂಧಿಸಿದಂತೆ ಸೀಟು ಹಂಚಿಕೆ ಚರ್ಚೆಗಳು ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಗುರುವಾರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ರೊಂದಿಗೆ ಕರೆ ಮಾಡಿ ನೇರವಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಮೊದಲ ಹಂತದ ನಾಮಪತ್ರ ಸಲ್ಲಿಕೆ ಈಗಾಗಲೇ ನಡೆಯುತ್ತಿದ್ದು, ಶುಕ್ರವಾರ ಅಂತಿಮ ದಿನವಾಗಿದೆ. ಇಂಡಿಯಾ ಕೂಟದ ಮಿತ್ರಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಕುರಿತಂತೆ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆ ಅನಿಶ್ಚಿತತೆಯ ವಾತಾವರಣ ಮೂಡಿದೆ. ಕಾಂಗ್ರೆಸ್ಗೆ ಹಂಚಿಕೆಯಾದ ಸ್ಥಾನಗಳ ಸಂಖ್ಯೆ ಮತ್ತು ಕೆಲ ಸಾಂಪ್ರದಾಯಿಕ ಕ್ಷೇತ್ರಗಳ ಬಗ್ಗೆ ಭಿನ್ನಾಭಿಪ್ರಾಯವೇ ಇದಕ್ಕೆಲ್ಲಾ ಪ್ರಮುಖ ಕಾರಣ ಎನ್ನಲಾಗಿದೆ.
ಮೊದ ಮೊದಲು ಆರ್ಜೆಡಿ ಕಾಂಗ್ರೆಸ್ಗೆ 52 ಸ್ಥಾನಗಳನ್ನು ನೀಡುವ ಭರವಸೆ ನೀಡಿತ್ತು, ಆದರೆ ಇದನ್ನು ಕೈ ನಾಯಕರು ತಿರಸ್ಕರಿಸಿ, ಕನಿಷ್ಠ 60 ಕ್ಷೇತ್ರಗಳನ್ನಾದರೂ ನೀಡುವಂತೆ ಒತ್ತಾಯಿಸಿದರು. ಸದ್ಯ ರಾಜ್ಯ ಮಟ್ಟದಲ್ಲಿನ ಎರಡು ನಾಯಕರ ನಡುವಿನ ಮಾತುಕತೆಗೆ ಅಲ್ಪ ವಿರಾಮ ಬಿದ್ದಿದ್ದು, ಟಿಕೆಟ್ ಹಂಚಿಕೆಯ ಚರ್ಚೆ ದೆಹಲಿ ಅಂಗಳ ತಲುಪಿದೆ.
ಕಾಂಗ್ರೆಸ್ ಪಕ್ಷದ 61 ಸ್ಥಾನಗಳ ಬೇಡಿಕೆಗೆ ಅನುಗುಣವಾಗಿ ಸೀಟುಗಳನ್ನು ನೀಡಲು ಆರ್ಜೆಡಿ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಆದರೆ, ಕಾಂಗ್ರೆಸ್ ಕೇಳಿರುವ ಕೆಲ ಪ್ರಮುಖ ಕ್ಷೇತ್ರಗಳ ಹಂಚಿಕೆಯಿಂದಾಗಿ ಮಾತುಕತೆ ಸ್ಥಗಿತಗೊಂಡಿದೆ. ನರಕತಿಯಗಂಜ್ ಮತ್ತು ವಾಸಲಿಗಂಜ್ ಜೊತೆಗೆ ಭದ್ರಕೋಟೆಯಾದ ಕಹಲ್ಗಾಂವ್ನಂತಹ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಪಕ್ಷ ಬಯಸುತ್ತಿದ್ದು, ಚೈನ್ಪುರ ಮತ್ತು ಬಚ್ವಾರಾ ಸೇರಿದಂತೆ ಇತರ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡ ಮತದಾರರ ಅಧಿಕಾರ ಯಾತ್ರೆಯು ರಾಜ್ಯದಲ್ಲಿ ಪಕ್ಷದ ಪರವಾದ ಹೊಸ ಅಲೆ ಸೃಷ್ಟಿಸಿದೆ ಎಂದು ನಂಬಿದ್ದ ಕಾಂಗ್ರೆಸ್, ಈ ಹಿಂದೆ ಮಾತುಕತೆಯ ಸಂದರ್ಭದಲ್ಲಿ ಆಕ್ರಮಣಕಾರಿ ನಿಲುವು ತಳೆದಿತ್ತು, ಆದರೆ ದಿನಕಳೆದಂತೆ ಕೈ ನಾಯಕರು ತನ್ನ ನಿಲುವನ್ನು ಸಡಿಲಗೊಳಿಸಿದರು ಎಂದು ತಿಳಿದುಬಂದಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬುಧವಾರ ( ಅ 15) ರಾತ್ರಿ ಕಾಂಗ್ರೆಸ್, ಬಿಹಾರ ವಿಧಾನಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸೀಟು ಹಂಚಿಕೆ ಮಾತುಗಳು ಪೂರ್ಣಗೊಳ್ಳುವ ಮೊದಲೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ರಾಘೋಪುರ ವಿಧಾನಸಭಾ ಸ್ಥಾನದಿಂದ ನಾಮಪತ್ರ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಲಾಲು ಪ್ರಸಾದ್ ಯಾದವ್ ಯಾದವ್ ನಿವಾಸದಲ್ಲಿ ಹಲವಾರು ಆರ್ಜೆಡಿ ಅಭ್ಯರ್ಥಿಗಳಿಗೆ ಪಕ್ಷದ ಬಿ ಫಾರಂ ವಿತರಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು, ಈ ನಡುವೆ ದೆಹಲಿಯಲ್ಲಿ ರಾಹುಲ್ ಗಾಂಧಿಯೊಂದಿಗಿನ ಚರ್ಚೆಯ ನಂತರ ತೇಜಸ್ವಿ ಯಾದವ್ ಪಾಟ್ನಾಗೆ ಮರಳಿದ ಬಳಿಕ ಅವುಗಳನ್ನು ಹಿಂತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಹಂತದ ಚುನಾವಣೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನವಾಗಿದೆ.(ಏಜೆನ್ಸೀಸ್)