

ಪಾಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಪ್ರಶ್ನಿಸಿದ ರಾಷ್ಟ್ರೀಯ ಜನತಾ ದಳ (RJD) ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi) ಗುರುವಾರ (ಅಕ್ಟೋಬರ್,16) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ಬೆಂಬಲಿಸಿ ದಾನಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ, RJD ಮತ್ತು ಕಾಂಗ್ರೆಸ್ ಮೈತ್ರಿಕೂಟ ಈಗ ಬುರ್ಖಾದ ಮೇಲೆ ರಾಜಕೀಯ ಮಾಡುತ್ತಿವೆ. ಇವರಿಗೆ ನುಸುಳುಕೋರರಿಗೆ ಬಿಹಾರದಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕೇ? ಬಿಹಾರದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಮೈತ್ರಿಕೂಟಕ್ಕೆ ಅವಕಾಶ ನೀಡಬೇಕೇ ಎಂದು ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿದ ಯೋಗಿ, ಆರ್ಜೆಡಿ ಮತ್ತು ಕಾಂಗ್ರೆಸ್ ಚುನಾವಣೆಯಲ್ಲಿ ಪಾರದರ್ಶಕತೆಯನ್ನು ವಿರೋಧಿಸುತ್ತವೆ. ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ನ್ನು ಯೋಗಿ ಶ್ಲಾಘಿಸಿದ್ದಾರೆ. ಅಲ್ಲದೆ, ಎನ್ಡಿಎ ಸರ್ಕಾರವು ರಾಜ್ಯವನ್ನು ಪರಿವರ್ತಿಸಿದೆ. ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಬಿಹಾರದಲ್ಲಿ ಅಭಿವೃದ್ಧಿಯನ್ನು ತಡೆಯಲು ಈಗ ಯಾರಿಗೂ ಸಾಧ್ಯವಿಲ್ಲ ಎಂದು ಯೋಗಿ ಒತ್ತಿ ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲಿ ನಿತೀಶ್ ಕುಮಾರ್ ಸರ್ಕಾರದ ಅಡಿಯಲ್ಲಿ ಮಾಡಿದ ಕೆಲಸ ಅಸಾಧಾರಣವಾಗಿತ್ತು ಎಂದು ಯೋಗಿ ಹೇಳಿದ್ದಾರೆ. 1990 ರಿಂದ 2005 ರವರೆಗೆ RJD ಬಿಹಾರವನ್ನು ವಂಶಪಾರಂಪರ್ಯ ರಾಜಕೀಯ ಮತ್ತು ಕಾನೂನುಬಾಹಿರತೆಯ ಭೂಮಿಯನ್ನಾಗಿ ಪರಿವರ್ತಿಸಿತು. ಇವರು ಎಲ್ಲೆಡೆ ಕಾನೂನುಬಾಹಿರತೆಯನ್ನು ಹರಡಿದರು ಮತ್ತು ಮಾಫಿಯಾಕ್ಕೆ ಇಂದಿನ ಸರ್ಕಾರದ ಬೆಂಬಲ ಸಿಕ್ಕಿತು. ಇದರಿಂದಾಗಿ, ರಾಜ್ಯದ ಸ್ಥಳೀಯರು ಬಿಹಾರವನ್ನು ತೊರೆದರು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ನಡುವಿನ ಸಂಬಂಧದ ಬಗ್ಗೆಯೂ ಆದಿತ್ಯನಾಥ್ ಮಾತನಾಡುತ್ತಾ, ಉತ್ತರ ಪ್ರದೇಶ ಮತ್ತು ಬಿಹಾರ ನಡುವಿನ ಸಂಬಂಧವು ಒಂದು ಆತ್ಮದ ಬಂಧ, ಒಂದು ಸಂಸ್ಕೃತಿಯ ಬಂಧ ಮತ್ತು ಒಂದು ಸಂಕಲ್ಪದ ಬಂಧ ಎಂದು ಯೋಗಿ ಹೇಳಿದರು.
ಭಗವಾನ್ ರಾಮ ಮತ್ತು ತಾಯಿ ಜಾನಕಿ ನಡುವಿನ ಬಾಂಧವ್ಯದಂತೆಯೇ ಈ ಸಂಬಂಧವು ಮುರಿಯಲಾಗದು. ಬಿಹಾರದಲ್ಲಿ ಆಡಳಿತಾರೂಢ ಎನ್ಡಿಎಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸಿದರು. (ಏಜೆನ್ಸೀಸ್)