

ಲಾಹೋರ್: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ದಿನ ಕಳೆದಂತೆ ಅವರ ಕ್ರೇಜ್ ಹೆಚ್ಚುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಶುರುವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದಕ್ಕೂ ಮುನ್ನ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ವಿರಾಟ್ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರ್ ಅಲಿ ವಿರಾಟ್ ಕೊಹ್ಲಿ ಕುರಿತಾಗಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವಿರಾಟ್ ಕೊಹ್ಲಿ ತಾವು ಅಭಿಮಾನಿಗಳ ಸರದಾರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ನಾಯಕ ಅಜರ್ ಅಲಿ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಯಾವತ್ತೂ ಆಡುತ್ತಾರೋ ಅವತ್ತು ಅವರ ಕ್ರೇಜ್ ಏನೆಂದು ಇಡೀ ವಿಶ್ವಕ್ಕೆ ತಿಳಿಯುತ್ತದೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ನೆಲದಲ್ಲಿ ಆಡಿದ ದಿನ ಕ್ರೀಡಾಂಗಣದ ತುಂಬಾ ಹಸಿರು ಜೆರ್ಸಿ ತುಂಬಿರುತ್ತದೆ. ಆದರೆ, ಅದರ ಮೇಲೆ ವಿರಾಟ್ ಎಂದು ಬರೆದಿರುತ್ತದೆ.
2019-22ರವರೆಗೂ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿದಾಗ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿರುವ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ಪಾಕಿಸ್ತಾನದಲ್ಲಿ ಅವರ ಬಗ್ಗೆ ಕ್ರೇಜ್ ಅಷ್ಟರ ಮಟ್ಟಿಗಿದೆ. ವಿರಾಟ್ ಅನ್ನು ಟೀಕಿಸುವ ಮೊದಲು ಜನರು ಆತ ಕ್ರಿಕೆಟ್ನಲ್ಲಿ ಮಾಡಿರುವ ಸಾಧನೆಯನ್ನು ಮೊದಲು ನೋಡಬೇಕು.
ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಭಾರತದ ಬೇರೆ ಆಟಗಾರರಿಗೂ ಅಭಿಮಾನಿಗಳಿದ್ದಾರೆ. ದಿಲೀಪ್ ಕುಮಾರ್, ಕಪಿಲ್ ದೇವ್, ಸುನೀಲ್ ಗವಅಸ್ಕರ್, ಸಚಿನ್ ತೆಂಡುಲ್ಕರ್, ಎಂ.ಎಸ್. ಧೋನಿ, ಸೆಹ್ವಾಗ್ ಹಾಗೂ ಯುವರಾಜ್ ಪಾಕಿಸ್ತಾನದಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಜನಪ್ರಿಯತೆ ಇವರೆಲ್ಲರಿಗಿಂತಲೂ ತುಸು ಹೆಚ್ಚಿದೆ. ಇತ್ತ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರ್ ಅಲಿ ಹೇಳಿಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕರು ಇವರ ಹೇಳಿಕೆಯನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.