

Rajasthan : ಮಕ್ಕಳನ್ನು ಹೆರಲು ಸಾಧ್ಯವಾಗದ ಕಾರಣ ವಿವಾಹಿತ ಮಹಿಳೆಯನ್ನು ಆಕೆಯ ಅತ್ತೆ ಮಾವ ಕೊಂದಿರುವ ಆಘಾತಕಾರಿ ಘಟನೆ ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯ ಅತ್ತೆ ಮಾವ ಮನೆಯಲ್ಲಿ ಬೆಂಕಿ ಹಚ್ಚಿ ಆಕೆಯ ದೇಹವನ್ನು ಸುಟ್ಟುಹಾಕಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರಿಗೆ ತಿಳಿಸದ್ದಾರೆ. ಇನ್ನು ಈ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಮೃತಳ ಕುಟುಂಬವನ್ನು ಫೋನಿನ ಮೂಲಕ ಸಂಪರ್ಕಿಸಿದ್ದು, ಅಂತಿಮ ವಿಧಿ ವಿಧಾನಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೂ, ತಮ್ಮ ಬಣ್ಣ ಬಯಲಾಗುತ್ತದೆ ಎಂದು ತಿಳಿದ ಕುಟುಂಬಸ್ಥರು ಅವಸರದಲ್ಲಿ ಆಕೆಯ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಇನ್ನು ಅಂತ್ಯಕ್ರಿಯೆ ನಡೆಯುವ ಮೊದಲೇ, ಖೋಹ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರ್ಧ ಸುಟ್ಟ ಶವವನ್ನು ವಶಪಡಿಸಿಕೊಂಡು ದೀಗ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.
ಮೃತಪಟ್ಟವರನ್ನು ಸರಳಾ ಎಂದು ಗುರುತಿಸಲಾಗಿದೆ. ಇವರು ಮೂಲತಃ ರಾಜಸ್ಥಾನದ ರೌನಿಜಾ ಗ್ರಾಮದ ನಿವಾಸಿಯಾಗಿದ್ದು, 2005 ರಲ್ಲಿ ಕಾಕ್ರಾ ಗ್ರಾಮದ ನಿವಾಸಿ ಅಶೋಕ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ, ಸರಳಾ ಕುಟುಂಬವು, ದೀಗ್ ಆಸ್ಪತ್ರೆ ಬಳಿ ಬಂದಿದ್ದು, ನನ್ನ ಮಗಳನ್ನು ಆಕೆಯ ಪತಿ ಅಶೋಕ್ ಹಾಗೂ ಕುಟುಂಬಸ್ಥರು ಕೊಂದಿದ್ದಾರೆ. ಆಕೆ ಗರ್ಭಿಣಿಯಾಗದ ಕಾರಣ ಅಶೋಕ್ ಪ್ರತಿದಿನ ಕಿರುಕುಳ ನೀಡುತ್ತಿದ್ದನು. ಹಾಗೆಯೇ ಹೊಡೆಯುತ್ತಿದ್ದನು ಎಂದು ಆರೋಪ ಮಾಡಿದ್ದಾರೆ.
ಇನ್ನು ನನ್ನ ಸಹೋದರಿಯನ್ನು ಮನೆಯಲ್ಲಿಯೇ ಸುಟ್ಟು ಹಾಕಿ ಅಂತ್ಯಸಂಸ್ಕಾರ ಮಾಡಲು ಅಶೋಕ್ ಮುಂದಾಗಿದ್ದಾನೆ. ವಿಷಯ ತಿಳಿದ ಕೂಡಲೇ ನಾವು ಮನೆಗೆ ಬಂದಿದ್ದೇವೆ ಆದರೆ, ಪೊಲೀಸರು ಶವವನ್ನು ದೀಗ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಸಹೋದರ ವಿಕ್ರಾಂತ್ ಸುದ್ದಿಮೂಲಗಳಿಗೆ ತಿಳಿಸಿದ್ದಾನೆ.
ಖೋಹ್ ಪೊಲೀಸ್ ಅಧಿಕಾರಿ ಮಾತನಾಡಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ. ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮಾಹಿತಿಗಳು ತಿಳಿದ ನಂತರ ಕೋರ್ಟ್ಗೆ ಆರೋಪಿಗಳನ್ನು ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)