

ಬೆಂಗಳೂರು: ಮನುಷ್ಯ ಮನುಷ್ಯ ಪ್ರೀತಿಸಿದರೆ ಸದ್ಗುಣ. ಮನುಷ್ಯ ಮನುಷ್ಯನನ್ನು ದ್ವೇಷಿಸಿದರೆ ದುರ್ಗುಣ. ಕುರುಬ ಜಾತಿಯಲ್ಲಿ ಹುಟ್ಟಬೇಕು ಎಂದು ನಾನೇನು ಅರ್ಜಿ ಹಾಕಿಕೊಂಡಿದ್ದಿಲ್ಲ. ಜಾತಿ ವ್ಯವಸ್ಥೆ ಮೊದಲಿನಿಂದಲೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ವಿವೇಕ ಕಿರುಹೊತ್ತಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಸವಣ್ಣನವರನ್ನು ಪೂಜಿಸುವುದು, ನಂತರ ಕರ್ಮ ಎನ್ನುವುದು ಪಟ್ಟಭದ್ರಹಿತಾಸಕ್ತಿಗಳು, ಆಷಾಢಭೂತಿಗಳು ಸೃಷ್ಟಿಸಿದ ವ್ಯವಸ್ಥೆಯಿದು. ಜಾತಿ ವ್ಯವಸ್ಥೆ, ಕಂದಾಚಾರದ ವಿರುದ್ಧ ಬಸವಣ್ಣ ಹೋರಾಡಿದರು ಎಂದರು.
ಸಾಮಾಜಿಕ, ಆರ್ಥಿಕ ಸಮಾನತೆಗೆ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿಯವರನ್ನು ಎಂದೂ ಮರೆಯಲಾಗದು. ಬ್ರಿಟಿಷರು ಸಂಸದೀಯ ವ್ಯವಸ್ಥೆ ನಾವೇ ತಂದಿದ್ದೇವೆ ಎಂದು ಹೇಳುತ್ತಾರೆ. ಆದರೆ, 850 ವರ್ಷಗಳ ಹಿಂದೆ ಬಸವಣ್ಣನವರು ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದರು. ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸಮಾನತೆ ಸಾರಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸರ್ಕಾರದ ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು, ಅದರಡಿ 'ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ' ಎಂದು ಉಲ್ಲೇಖಿಸಲು ಸೂಚಿಸಿರುವೆ. ನುಡಿದಂತೆ ನಡೆದ ಬಸವಣ್ಣ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿದರು ಎಂದರು.
ಇದೇ ಸಂದರ್ಭದಲ್ಲಿ ' ಕಾಗೆ ಒಂದು ಅಗುಳ ಕಂಡರೆ...' ವಚನ ವಾಚಿಸಿದ ಸಿಎಂ ಸಿದ್ದರಾಮಯ್ಯ ಅದರ ಅರ್ಥವನ್ನು ವಿಶ್ಲೇಷಿಸಿದರು. ಜನರಲ್ಲಿ ವಿವೇಕ ಮೂಡಿಸಲು, ವೈಚಾರಿಕತೆ ಬೆಳೆಸಲು ಬಸವಣ್ಣ ಶ್ರಮಿಸಿದರು ಎಂದು ಗುಣಗಾನ ಮಾಡಿದರು.
ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ ಅತ್ಯಂತ ಮೌಲಿಕವಾದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ವಿವಿಗಳಲ್ಲಿ ಅಧ್ಯಯನ ಪೀಠ, ಶಾಲೆ-ಕಾಲೇಜುಗಳ ಪಠ್ಯದಲ್ಲಿ ಬಸವಣ್ಣನವರ ಕುರಿತು ಅಧ್ಯಾಯ ಸೇರಿಸಲು ಸಲಹೆ ನೀಡಿದರೆ, ಸಿದ್ದರಾಮಯ್ಯ ತೆಗೆದುಕೊಂಡ ದಿಟ್ಟ ನಿರ್ಣಯ ಎಷ್ಟು ಹೊಗಳಿದರೂ ಕಡಿಮೆಯೇ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಡಿ ಹೊಗಳಿದರು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಶಿವರಾಜ್ ಎಸ್.ತಂಗಡಗಿ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ, ಮಂಕಾಳ ವೈದ್ಯ, ಶಮಧು ಬಂಗಾರಪ್ಪ, ಕೆ.ಎಚ್.ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯಲ್ ಇನ್ನಿತರರು ಉಪಸ್ಥಿತರಿದ್ದರು.