

ಬೆಂಗಳೂರು: ದೇಶದಲ್ಲಿ 1 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು ಬ್ಯಾನ್ ಆಗಿ ಮೂರು ವರ್ಷ ಕಳೆದಿದೆ. ಆದರೀಗ ನಿಷೇಧಿತ 1 ಸಾವಿರ ರೂ. ಮುಖಬೆಲೆಯ ನೋಟುಗಳು ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡುತ್ತಿವೆ.
ಜಾಲಹಳ್ಳಿ ಎಚ್ಎಂಟಿ ಸವಿರ್ಸ್ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರಿನಲ್ಲಿದ್ದ ಒಂದು ಸಾವಿರ ಮುಖಬೆಲೆಯ 30 ಲಕ್ಷ ರೂ. ಹಳೆಯ ನೋಟನ್ನು ಜಾಲಹಳ್ಳಿ ಪೊಲೀಸರು ಜಪ್ತಿ ಮಾಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಜು. 28ರ ಮಧ್ಯಾಹ್ನ 12.30ರ ಸುಮಾರಿನಲ್ಲಿ 1 ಸಾವಿರ ರೂ. ಮುಖಬೆಲೆಯ 30 ಲಕ್ಷ ರೂಪಾಯಿ ನೋಟುಗಳೊಂದಿಗೆ ಮೂವರು ಮಾರುತಿ ಸುಜುಕಿ ಕಾರಿನಲ್ಲಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು ನಿಷೇಧಿತ 30 ಲಕ್ಷ ರೂ. ನೋಟುಗಳನ್ನು ವಶಕ್ಕೆ ಪಡೆದು ಕಾರಿನಲ್ಲಿದ್ದ ಮಾಗಡಿ ರಸ್ತೆ ಕೆ.ಪಿ.ಅಗ್ರಹಾರ ನಿವಾಸಿ ಕಿರಣ್ಕುಮಾರ್ (31), ನಾಗರಬಾವಿಯ ಪ್ರವಿಣ್ಕುಮಾರ್ (29) ಮತ್ತು ಕಾಮಾಕ್ಷಿಪಾಳ್ಯದ ಪವನ್ಕುಮಾರ್ (24) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ, ಮಾಗಡಿ ರಸ್ತೆಯ ಮಾಳಗಾಳದ ಹನುಮಂತೇ ಗೌಡ ಮತ್ತು ವಿಜಯನಗರದ ರಾಜಶೇಖರ್ ಎಂಬುವರು ನಮಗೆ ನಿಷೇಧಿತ ನೋಟುಗಳನ್ನು ಚಲಾವಣೆಗೆಂದು ಕೊಟ್ಟಿದ್ದರು. ಜನರ ಕಡೆಯಿಂದ ಶೇ.10 ರಂತೆ ಹೊಸ ನೋಟು ಪಡೆದು ಅವರಿಗೆ ಹಳೇ ನೋಟು ಮಾರಾಟ ಮಾಡಲು ಅವರೇ ಸೂಚಿಸಿದ್ದರು. ಅದರಂತೆ ಹಳೇ ನೋಟು ಚಲಾವಣೆಗೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.