

ಬೆಂಗಳೂರು: ರಾಜ್ಯದಲ್ಲಿ 6 ಮತ್ತು 7ನೇ ತರಗತಿಗೆ ಆನ್‌ಲೈನ್ ಶಿಕ್ಷಣ ರದ್ದು ಮಾಡಲಾಗಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ.. ಅಂತಹ ಯಾವುದೇ ಅಧಿಕೃತ ತೀರ್ಮಾನ ಆಗಿಲ್ಲ ಎಂಬ ಮತ್ತೊಂದು ಹೇಳಿಕೆ ಹೊರಬಿದ್ದಿದೆ. ಪರಿಣಾಮ ವಿದ್ಯಾರ್ಥಿಗಳು ಮತ್ತು ಪಾಲಕರು ಗೊಂದಲದಲ್ಲಿ ಸಿಲುಕಿದ್ದು, ಈ ಕುರಿತು ಸ್ವತಃ ಶಿಕ್ಷಣ ಸಚಿವರೇ ನೀಡಿರುವ ಸ್ಪಷ್ಟನೆ ಇಲ್ಲಿದೆ ನೋಡಿ.
ಇಂದು(ಗುರುವಾರ) ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸಂಪುಟ ಸಭೆಯಲ್ಲಿ ಆನ್‌ಲೈನ್ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿವರೆಗಿನ ಆನ್‌ಲೈನ್ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳ ಆನ್‌ಲೈನ್ ಕ್ಲಾಸ್ಗಳನ್ನು ರದ್ದು ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು, ಇಂತಹ ತೀರ್ಮಾನವೇ ಆಗಿಲ್ಲ ಎಂದಿದ್ದಾರೆ.
ಇನ್ನು 6 ಮತ್ತು 7ನೇ ತರಗತಿಗೆ ಆನ್‌ಲೈನ್ ಶಿಕ್ಷಣ ರದ್ದು ಸಂಬಂಧ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ. 6ರಿಂದ 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣದ ಸಾಧಕ-ಬಾಧಕಗಳ ಕುರಿತು ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದೆ. ಸಮಿತಿಯು 10 ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಆ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.