

ಶಿವಮೊಗ್ಗ: ಕರೊನಾ ಮುಕ್ತ ಪ್ರದೇಶದಲ್ಲಿ ಶಾಲೆಗಳನ್ನು ಆರಂಭಿಸುವುದು, ಸೋಂಕು ಇರುವ ಭಾಗದಲ್ಲಿ ನಂತರ ಶಾಲೆಗಳನ್ನು ತೆರೆಯುವ ನಿರ್ಧಾರ ಮೂರ್ಖತನ ಎಂದಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ನಿಭಾಯಿಸಲು ಇರುವ ಹಲವು ಮಾರ್ಗಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲೇಬೇಕು ಎಂದ ಅವರು ಆ ದಿನ ಏನು ಮಾಡಿದರೆ ಬೆಸ್ಟ್ ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ.
ನಗರದಲ್ಲಿ ಗುರುವಾರ ಪ್ರೆಸ್ಟ್ ಟ್ರಸ್ಟ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಸ್ವಲ್ಪ ತಡವಾದರೂ ಪರವಾಗಿಲ್ಲ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಲೇಬೇಕು. ಪರೀಕ್ಷೆಯೇ ಇಲ್ಲದ ಶಿಕ್ಷಣ ವ್ಯರ್ಥ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೇಕಿದ್ದರೆ ಪರೀಕ್ಷೆ ದಿನಗಳಂದು ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಲಾಕ್ಡೌನ್ ಘೋಷಿಸಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಲು ಅವಕಾಶ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ನಂತರವೇ ಶಾಲೆಗಳನ್ನು ಆರಂಭಿಸುವುದು ಒಳಿತು ಎಂದ ಮಾಜಿ ಸಚಿವರು, ವಿವಿಧ ಜಯಂತಿಗಳೂ ಸೇರಿ ಅನೇಕ ಸರ್ಕಾರಿ ರಜೆಗಳಿವೆ. ಆ ದಿನಗಳಲ್ಲಿ ಶಾಲೆಗಳನ್ನು ನಡೆಸಬಹುದು. ಪಠ್ಯಕ್ರಮ ಕಡಿತದಂತಹ ಅನೇಕ ಮಾರ್ಗಗಳಿವೆ. ಹೀಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮಾಜಿ ಸಚಿವರು ಹೇಳಿದರು.
ಆನ್‌ಲೈನ್ ಶಿಕ್ಷಣ ಬೇಡ ಎನ್ನುವುದಕ್ಕೆ ತಾಂತ್ರಿಕ, ಆರ್ಥಿಕ ಕಾರಣಗಳ ಜತೆಗೆ ಆರೋಗ್ಯದ ಕಾರಣವೂ ಇದೆ. ಆನ್‌ಲೈನ್ ಶಿಕ್ಷಣ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಜ್ಞ ವೈದ್ಯರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವಸರದ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಖಾಸಗಿ ಶಾಲೆ ನಿಯಂತ್ರಣಕ್ಕೆ ಸಕಾಲ: ಕರೊನಾ ಸಂದರ್ಭದಲ್ಲಿ ಅನೇಕ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು, ಬಲವಂತವಾಗಿ ಈ ವರ್ಷದ ಶುಲ್ಕ ಕಟ್ಟಿಸಿಕೊಳ್ಳುವುದನ್ನು ತಡೆಯಲು ಸರ್ಕಾರದ ಬಳಿ ಅವಕಾಶಗಳಿವೆ. ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಇದು ಸಕಾಲ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಮರ್ಥರಿದ್ದಾರೆ. ಶಿಕ್ಷಣ ಇಲಾಖೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅಧ್ಯಯನ ಶೀಲರೂ ಹೌದು. ಬೇರೆಯವರ ಅನಿಸಿಕೆಗಳನ್ನೂ ಕೇಳುವ ವ್ಯವಧಾನ ಅವರಿಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾರೆಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿರಿ ಆನ್‌ಲೈನ್ ತರಗತಿ ಆಫ್: ವಿಜಯವಾಣಿ ಅಭಿಯಾನಕ್ಕೆ ಜಯ