ಗಂಗೊಳ್ಳಿ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಸರ್ಕಲ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆಯ ಚೆಕ್‌ಪೋಸ್ಟ್ ಹತ್ತಿರ ಕೆಎಸ್ಸಾರ್ಟಿಸಿ ಬಸ್ ಗಂಗೊಳ್ಳಿ-ತ್ರಾಸಿ ಮುಖ್ಯರಸ್ತೆಯ ಬದಿಯ ಹೊಂಡಕ್ಕೆ ಜಾರಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರು ಪಾರು
ಕುಂದಾಪುರದಿಂದ ಗಂಗೊಳ್ಳಿ ಕಡೆಗೆ ಸಾಗುತ್ತಿದ್ದ ಬಸ್ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ದಾರಿ ನೀಡಲು ಹೋದ ಪರಿಣಾಮ ಬಸ್ ರಸ್ತೆ ಸಮೀಪದ ಕುಡಿಯುವ ನೀರಿನ ಪೈಪ್‌ಲೈನ್ ಹೊಂಡಕ್ಕೆ ಜಾರಿ ನಿಂತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.
ಅವೈಜ್ಞಾನಿಕ ಕಾಮಗಾರಿಯಿಂದ ಕಂಟಕ
ಗಂಗೊಳ್ಳಿ-ತ್ರಾಸಿ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್ ಅಳವಡಿಸಲು ನಡೆಸಲಾದ ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.