

ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಮಹಿಳಾ ಪ್ರಯಾಣಿಕರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ ಘಟನೆ ಶನಿವಾರ ಶಿರಾಡಿ ಘಾಟ್‌ನಲ್ಲಿ ನಡೆದಿದೆ.
ಬಾಲಕಿಯು ಕುಟುಂಬದ ಜತೆಗೆ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದು, ಆಕೆ ಕುಳಿತಿದ್ದ ಆಸನದ ಪಕ್ಕದಲ್ಲೇ ಅನ್ಯಕೋಮಿನ ವ್ಯಕ್ತಿಯೋರ್ವ ಕುಳಿತಿದ್ದನು. ಈತನು ಬಾಲಕಿಯ ಎದೆಗೆ ಕೈ ಹಾಕಿ ಹಿಂಸೆ ನೀಡುತ್ತಿದ್ದನು. ಬಾಲಕಿಯು ತನ್ನ ಸಂಬಂಧಿಕರಲ್ಲಿ ಈ ವಿಚಾರ ತಿಳಿಸಿದ್ದು, ಕೆರಳಿದ ಮಹಿಳಾ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ.
ಘಟನೆಯನ್ನು ಸಹಪ್ರಯಾಣಿಕರೊಬ್ಬರು ವೀಡಿಯೊ ಚಿತ್ರೀಕರಣ ಮಾಡಿದ್ದು, ಹಲ್ಲೆಗೊಳಗಾದವನು ತನ್ನ ಕಡೆಯವನಿಗೆ ಈ ವಿಚಾರವನ್ನು ತಿಳಿಸಿದ್ದಾನೆ. ಈತನ ಬೆಂಬಲಿಗರು ಬಸ್ಸಿನೊಳಗೆ ನುಗ್ಗಿ ವೀಡಿಯೊ ಚಿತ್ರೀಕರಣ ಮಾಡಿದ್ದ ವ್ಯಕ್ತಿಯನ್ನು ಬೆದರಿಸಲು ಮುಂದಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದ್ದ ವ್ಯಕ್ತಿಯನ್ನು ಆತನ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.