ಸಮಗ್ರ ಕೃಷಿ ಲಾಭದ ಖುಷಿ: ದ್ಯಾಮನಗೌಡರ ಕೃಷಿ ಪ್ರಯೋಗಕ್ಕೆ ಒಲಿದಿವೆ ಪುರಸ್ಕಾರ!

ವಿಜಯವಾಣಿ - 2023-12-23T100748.884
Published on

ಜಗದೀಶ ಹೊಂಬಾಳಿ, ಬೆಳಗಾವಿ

ಬೆಳಗಾವಿ: ಕೃಷಿ ಕೆಲಸ ಎಂದರೆ ಮೂಗು ಮುರಿಯುವವರೇ ಹೆಚ್ಚು ಆದರೆ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ತಾಂತ್ರಿಕ ಶಿಕ್ಷಣ ಪೂರೈಸಿ ಕೈತುಂಬಾ ಸಂಬಳ ಬರುವ ನೌಕರಿ ತೊರೆದ ಯುವಕ ಕೃಷಿಯಲ್ಲಿ ತೊಡಗಿ ಯಶಸ್ವಿ ರೈತನಾಗಿದ್ದಾನೆ. ಸವದತ್ತಿ ತಾಲೂಕಿನ ಚುಳಕಿ ಗ್ರಾಮದ ದ್ಯಾಮನಗೌಡ ಪಾಟೀಲ ಕೃಷಿಯಲ್ಲಿ ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸಿ ಸಾಧಿಸಿ ಇತರರಿಗೆ ಮಾದರಿಯಾಗಿದ್ದಾರೆ.

10 ಎಕರೆ ಜಮೀನಿನ ಪೈಕಿ 6 ಎಕರೆ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿ, ಸಮಗ್ರ ಕೃಷಿ ಪದ್ಧತಿ ಅನುಸರಿಸಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ, ಮೀನು ಸಾಕಣೆ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ವರ್ಷಕ್ಕೆ 8ರಿಂದ 10 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ನೀರಿಗೆ ಕೃಷಿ ಹೊಂಡ: ದ್ಯಾಮನಗೌಡ ಅವರ ಜಮೀನಿನ ಸುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಹೀಗಾಗಿ ಪ್ರಾಣಿ-ಪಕ್ಷಿಗಳು, ಕುರಿಗಾರರು, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದಲೂ 10 ಎಕರೆ ಜಮೀನಿನ ಪೈಕಿ 6 ಎಕರೆಯಲ್ಲಿ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅದು ಮಿಶ್ರ ಬೇಸಾಯಕ್ಕೆ ಅನುಕೂಲವಾಗುತ್ತಿದ್ದು, ಭರ್ಜರಿ ಆದಾತಕ್ಕೆ ನೆರವಾಗಿದೆ.

ಮಳೆಯಾಶ್ರಿತ ಜಮೀನಿನಲ್ಲಿ ಕೈಗೊಂಡ ಕೃಷಿ ಪ್ರಯೋಗಗಳು ಮಾದರಿಯಾಗಿವೆ. 2014ರಲ್ಲಿ ಕೃಷಿ ಕಾರ್ಯ ಆರಂಭಿಸಿದ ದ್ಯಾಮನಗೌಡ ಅವರು ಕೃಷಿಯಲ್ಲಿ ಅನುಸರಿಸಿದ ಪ್ರಯೋಗಗಳನ್ನು ಪರಿಗಣಿಸಿ 2017ರಲ್ಲಿ 'ಶ್ರೇಷ್ಠ ಕೃಷಿಕ' ತಾಲೂಕು ಪ್ರಶಸ್ತಿ ಲಭಿಸಿದೆ. ಅವರ ಸಾಧನೆ ಪರಿಗಣಿಸಿ 30ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ದ್ಯಾಮನಗೌಡರನ್ನು ಮಾದರಿಯಾಗಿಟ್ಟುಕೊಂಡು ಕೃಷಿ ಇಲಾಖೆಯಿಂದ ಪುಸ್ತಕವನ್ನೂ ಹೊರತರಲಾಗಿದೆ.

ಕಷ್ಟಪಟ್ಟರೆ ಎಲ್ಲ ರೈತರೂ ಸಾಧಕರಾಗುತ್ತಾರೆ. ಬಹಳಷ್ಟು ರೈತರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡ ಕೆಲ ಸಂದರ್ಭದಲ್ಲಿ ಎಡವುತ್ತಾರೆ. ಅಂತಹವರು ಎದೆಗುಂದದೆ ಕೃಷಿ ಇಲಾಖೆ ಸಹಾಯ ಪಡೆಯು ಮೇಲೇಳಬೇಕು. ಬಹಳಷ್ಟು ಸಾಧಕ ರೈತರು ಎಲೆಮರೆ ಕಾಯಿಯಂತಿದ್ದಾರೆ. ಅಂತಹವರನ್ನೂ ಕೃಷಿ ಇಲಾಖೆ ಗುರುತಿಸಿ ಪೋತ್ಸಾಹಿಸಬೇಕು ಎಂದು ಯುವ ರೈತ ದ್ಯಾಮನಗೌಡ ಪಾಟೀಲ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net