ಮಹಿಳೆಯರ ಐಪಿಎಲ್​ ಖ್ಯಾತಿಯ ಡಬ್ಲ್ಯುಪಿಎಲ್​ನಿಂದಲೂ ಬಿಸಿಸಿಐಗೆ ಭರ್ಜರಿ ಆದಾಯ

wpl web
Published on

ಪಣಜಿ: ಹಾಲಿ ವರ್ಷ ಮಾರ್ಚ್​ನಲ್ಲಿ ಮುಂಬೈನಲ್ಲಿ ನಡೆದ ಮಹಿಳಾ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಆಯೋಜನೆಯಿಂದ ಬಿಸಿಸಿಐ ಬರೋಬ್ಬರಿ 377.49 ಕೋಟಿ ರೂ. ಆದಾಯ ಗಳಿಸಿದೆ. ಬಿಸಿಸಿಐ ಖಜಾಂಚಿ ಆಶಿಶ್​ ಶೆಲಾರ್​ ಎಜಿಎಂನಲ್ಲಿ 2022-23ರ ವಿತ್ತ ವರ್ಷದ ವರದಿಯಲ್ಲಿ ಇದನ್ನು ತಿಳಿಸಿದ್ದಾರೆ. 5 ತಂಡಗಳ ಮಹಿಳಾ ಟಿ20 ಟೂರ್ನಿ ಆಯೋಜನೆಯಿಂದ ಬಿಸಿಸಿಐ ವಾರ್ಷಿಕ ಆದಾಯ ಶೇ. 6 ಏರಿಕೆ ಕಂಡಿದೆ. ಐಪಿಎಲ್​ ಪ್ರಸಾರ ಹಕ್ಕು ಮಾರಾಟದಿಂದ ಗರಿಷ್ಠ ಶೇ. 38 ಆದಾಯ ಬಂದಿದ್ದರೆ, ಟೀಮ್​ ಇಂಡಿಯಾದ ಅಂತಾರಾಷ್ಟ್ರೀಯ ಸರಣಿಗಳಿಂದ ಶೇ. 10 ಆದಾಯ ಗಳಿಸಿದೆ.

ಒಟ್ಟು 6,558 ಕೋಟಿ ರೂ. ಆದಾಯ

2022-23ರ ವಿತ್ತ ವರ್ಷದಲ್ಲಿ ಬಿಸಿಸಿಐ ಒಟ್ಟು 6,558.80 ಕೋಟಿ ರೂ. ಆದಾಯ ಗಳಿಸಿದೆ. ಇದು 2021-22ರ ಆದಾಯಕ್ಕಿಂತ (4,360.57 ಕೋಟಿ ರೂ) 2,198 ಕೋಟಿ ರೂ. ಅಧಿಕವಾಗಿದೆ. ಕರೊನಾ ಭೀತಿಯಿಂದಾಗಿ 2021-22ರ ಸಾಲಿನ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕೆಲ ಟೂರ್ನಿಗಳನ್ನು ರದ್ದುಗೊಳಿಸಿದ್ದರಿಂದಾಗಿ ಆದಾಯ ಕುಸಿದಿತ್ತು.

ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ 100 ಕೋಟಿ ರೂ. ಹಂಚಿಕೆ

ಪ್ರಮುಖ ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ 100 ಕೋಟಿ ರೂ. ಮತ್ತು ಈಶಾನ್ಯ ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ 12.5 ಕೋಟಿ ರೂ. ಹಂಚಿಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಪುದುಚೇರಿ ಕ್ರಿಕೆಟ್​ ಸಂಸ್ಥೆಗೆ 17.5 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ ಶೇ. 85 ಮೊತ್ತವನ್ನು ಕ್ರಿಕೆಟ್​ ಆಟದ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸುವಂತೆಯೂ ಬಿಸಿಸಿಐ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net