

ಕುರುಕ್ಷೇತ್ರ: ಕರೊನಾ ಸಾಂಕ್ರಾಮಿಕ ರೋಗ ಶುರುವಾದ ಮೇಲೆ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ ಬಿದ್ದಿದ್ದೆ. ಇದೀಗ ಲಾಕ್ಡೌನ್ ಎಲ್ಲ ಮುಗಿದಿದ್ದರೂ ಇಂಥವರು ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುವಂತಾಗಿದೆ.
ಹಾಗೇ ಹರ್ಯಾಣದ ಕುರುಕ್ಷೇತ್ರದಲ್ಲಿ ರಸ್ತೆ ಬದಿಗೆ ಗಾಡಿಯಲ್ಲಿ ಚಹಾ ಮಾರುತ್ತಿದ್ದ ಓರ್ವನಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಮುಗಿಯದ ಕರೊನಾ, ಪದೇಪದೆ ಲಾಕ್ಡೌನ್ನಿಂದ ಆತನ ವ್ಯಾಪಾರ ಪೂರ್ತಿ ತಳಕಂಡಿತ್ತು. ಬದುಕು ನಡೆಸುವುದೇ ಕಷ್ಟವಾದಾಗ, ಬೇರೆ ಇನ್ನೇನಾದರೂ ಮಾಡೋಣ ಎಂದು ಬ್ಯಾಂಕ್ಗೆ ಸಾಲದ ಅರ್ಜಿ ಹಾಕಿದ್ದರು. ಬ್ಯಾಂಕ್ನಿಂದ ಪಡೆದ ಸಾಲದಿಂದ ಯಾವುದಾದರೂ ಸಣ್ಣ ಉದ್ಯಮ ಪ್ರಾರಂಭಿಸಿಕೊಳ್ಳಬಹುದು ಎಂಬ ಆಸೆ ಅವರದ್ದು.
ಆದರೆ ಬ್ಯಾಂಕ್ ಚಹಾ ಮಾರಾಟಗಾರನ ಸಾಲದ ಅರ್ಜಿಯನ್ನು ತಿರಸ್ಕರಿಸಿತು. ಇವರು ಈಗಾಗಲೇ ಬ್ಯಾಂಕ್ನಿಂದ ಒಟ್ಟು 50 ಕೋಟಿ ರೂ.ಸಾಲ ಪಡೆದಿದ್ದಾರೆ. ಹಾಗಾಗಿ ಮತ್ತೆ ಸಾಲ ನೀಡಲು ಸಾಧ್ಯವೇ ಇಲ್ಲ ಎಂದು ಬ್ಯಾಂಕ್ ಕಾರಣ ಕೊಟ್ಟಿದೆ.
ಈತನ ಹೆಸರು ರಾಜ್ಕುಮಾರ್ ಎಂದು. ಕುರಕ್ಷೇತ್ರದ ನಿವಾಸಿ. ಬ್ಯಾಂಕ್ ಹೇಳಿದ ಸಾಲದ ಮೊತ್ತ ಕೇಳಿ ಸದ್ಯ ಶಾಕ್ ಆಗಿದ್ದಾರೆ.
ರಾಜ್ಕುಮಾರ್ ಈಗಾಗಲೇ 50 ಕೋಟಿ ರೂ.ಸಾಲ ಪಡೆದಿದ್ದಾರೆ. ಅವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲು ವಿಫಲರಾಗಿದ್ದಾರೆ. ಹಾಗಾಗಿ ಮತ್ತೆ ಸಾಲ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ. ಇದನ್ನೂ ಓದಿ: ಚಹಾ ಪುಡಿ ಬೆಲೆ ಗಣನೀಯ ಏರಿಕೆ ಕಂಡರೆ ಅಚ್ಚರಿ ಇಲ್ಲ ಅಂತಿದ್ದಾರೆ ಪರಿಣತರು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಕುಮಾರ್, ನಾನು ಚಹಾ ಮಾರಿ ಕುಟುಂಬವನ್ನು ಸಾಕುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಸ್ವಲ್ಪವೂ ಚೆನ್ನಾಗಿಲ್ಲ. ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇನೆ. ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದರೆ, ಅವರು ತಿರಸ್ಕರಿಸಿದ್ದಾರೆ. ಕಾರಣ ಕೇಳಿದರೆ, ನಿಮಗೆ ಈಗಾಗಲೇ 50 ಕೋಟಿ ರೂ. ಸಾಲ ನೀಡಿದ್ದೇವೆ. ನೀವು ಮರುಪಾವತಿ ಮಾಡಲಿಲ್ಲ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಒಂದು ರೂಪಾಯಿ ಕೂಡ ಸಾಲ ಪಡೆದಿಲ್ಲ. ಅಂಥದ್ದರಲ್ಲಿ 50 ಕೋಟಿ ರೂ.ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನಾನು ಬ್ಯಾಂಕ್ಗೆ ಹೋದಾಗ ನನ್ನ ಆಧಾರ್ ಕಾರ್ಡ್ ಕೇಳಿದರು. ಅದನ್ನೆಲ್ಲ ತೋರಿಸಿದೆ. ಆದರೆ ಈ 50 ಕೋಟಿ ರೂ.ದಿಂದ ಕಂಗಾಲಾಗಿದ್ದೇನೆ. ನನ್ನ ಹೆಸರಲ್ಲಿ, ನನಗೆ ವಂಚನೆ ಮಾಡಿ ಯಾರು ಸಾಲ ಪಡೆದಿದ್ದಾರೆ. ಇಲ್ಲಿ ಏನು ಗೋಲ್ಮಾಲ್ ಆಗಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರಾಜ್ಕುಮಾರ್ ಅಳಲು ತೋಡಿಕೊಂಡಿದ್ದಾರೆ. (ಏಜನ್ಸೀಸ್)