

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದ್ದು, ಭರ್ಜರಿ ಕಮ್ಬ್ಯಾಕ್ ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ (World Test Championship Finale) ದೃಷ್ಠಿಯಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಉಭಯ ತಂಡಗಳ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಸ್ಲೆಡ್ಜಿಂಗ್ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಮೈದಾನದ ಹೊರಗೆ ಹಾಗೂ ಒಳಗೆ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಮ್ ಇಂಡಿಯಾದವರನ್ನು ಗುರಿಯಾಗಿಸಿ ಸ್ಲೆಡ್ಜಿಂಗ್ ಮಾಡುವುದನ್ನು ನಾವು ಗಮನಿಸಿದ್ದೇವೆ. ಇದೀಗ ಈ ತಂತ್ರವನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಅನುಸರಿಸುತ್ತಿದ್ದು, ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲಿಗೆ ವಿರಾಟ್ ಕೊಹ್ಲಿ, ಆ ಬಳಿಕ ರವೀಂದ್ರ ಜಡೇಜಾ ಹಾಗೂ ರೋಹಿತ್ ಶರ್ಮರನ್ನು ಟಾರ್ಗೆಟ್ ಮಾಡಿದ್ದ ಆಸ್ಟ್ರೇಲಿಯಾದ ಮಾಧ್ಯಮಗಳು ಇದೀಗ ಟೀಮ್ ಇಂಡಿಯಾದ ಆಟಗಾರರನ್ನು ಗುರಿಯಾಗಿಸಿಕೊಂಡು ಪೋಸ್ಟ್ ಮಾಡುತ್ತಿವೆ. ಆಟಗಾರರ ಫೋಟೋಗಳನ್ನು ಅವಹೇಳನಕಾರಿಯಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ ನಿತೀಶ್ ರೆಡ್ಡಿ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರಿಷಭ್ ಪಂತ್ರ ಫೋಟೋಗಳನ್ನು ಬಳಸಿ ಬೇಬಿ ಬಂಚ್ ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಮೊದಲ ದಿನದ ಕೊನೇ ಎಸೆತಕ್ಕೆ ಮುನ್ನ ಜಸ್ಪ್ರೀತ್ ಬುಮ್ರಾ ಮತ್ತು ಆಸೀಸ್ ಯುವ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ನಡುವೆ ಜಟಾಪಟಿ ಏರ್ಪಟ್ಟಿತು. ಇದು ಭಾರತ ತಂಡವನ್ನು ಕೆರಳಿಸಿದ್ದಲ್ಲದೆ, 2ನೇ ದಿನ ಹೊಸ ಜೋಶ್ನಲ್ಲಿ ಕಣಕ್ಕಿಳಿಯುವ ಸ್ಫೂರ್ತಿಯನ್ನೂ ತುಂಬಿತು. ದಿನದ ಕೊನೇ ಎಸೆತ ಎಸೆಯಲು ಬುಮ್ರಾ ರನ್ಅಪ್ನಲ್ಲಿದ್ದಾಗ ಸ್ಟ್ರೈಕರ್ ಖವಾಜ ಬೇಗನೆ ಸಿದ್ಧರಾಗದೆ ಸಮಯ ವ್ಯರ್ಥಗೊಳಿಸುತ್ತಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬುಮ್ರಾ ಬೌಲಿಂಗ್ಗೆ ಮುಂದಾದಾಗ, ನಾನ್-ಸ್ಟ್ರೈಕರ್ನಲ್ಲಿದ್ದ ಕಾನ್ಸ್ಟಾಸ್ ವಾಗ್ವಾದಕ್ಕೆ ಮುಂದಾದರು. ಬುಮ್ರಾ ಕೂಡ ಅದಕ್ಕೆ ದಿಟ್ಟ ಉತ್ತರ ನೀಡಿದಾಗ ಅಂಪೈರ್ ಇಬ್ಬರನ್ನೂ ಸಮಾಧಾನಪಡಿಸಿದರು.
ನಂತರದ ಎಸೆತದಲ್ಲಿ ಖವಾಜ, 2ನೇ ಸ್ಲಿಪ್ನಲ್ಲಿ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ಔಟಾದರು. ಇದರ ಬೆನ್ನಲ್ಲೇ ಬುಮ್ರಾ ತಿರುಗಿಬಂದು ಕಾನ್ಸ್ಟಾಸ್ರನ್ನು ದುರುಗುಟ್ಟಿ ನೋಡಿದರು. ಮಾತ್ರವಲ್ಲದೆ ಎಲ್ಲ ಭಾರತೀಯ ಆಟಗಾರರು ಕಾನ್ಸ್ಟಾಸ್ರನ್ನು ಬಹುತೇಕ ಸುತ್ತುವರಿದು ಸಂಭ್ರಮಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಇದು ಭಾರತ ತಂಡದಲ್ಲಿ ಒಡಕು ಮೂಡಿರುವ ವರದಿಗಳಿಗೆ ನೀಡಿದ ದಿಟ್ಟ ಉತ್ತರದಂತೆಯೂ ಕಾಣಿಸಿತು. ಈ ವಿಚಾರವಾಗಿ ಇದೀಗ ಆಸ್ಟ್ರೇಲಿಯಾದ ಮಾಧ್ಯಮಗಳು ಭಾರತದ ಆಟಗಾರರನ್ನು ಗುರಿಯಾಗಿಸಿ ಅವಹೇಳನಕಾರಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.