

ಆಗ್ರಾ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ಮಹಲ್ ಪ್ರವೇಶಕ್ಕೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಹೀಗೆಂದು ಪುರಾತತ್ವ ಇಲಾಖೆ ಘೋಷಿಸಿದೆ.
ಮಂಗಳವಾರ ಬೆಳಗ್ಗೆಯಿಂದ ಇಡೀ ದಿನ ತಾಜ್ಮಹಲ್ ನೋಡಲು ಬರುವ ಪ್ರವಾಸಿಗರು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಅಲ್ಲದೇ ಪಕ್ಕದ ಐತಿಹಾಸಿಕ ಕಟ್ಟಡಗಳ ವೀಕ್ಷಣೆಗೂ ಸಂಪೂರ್ಣ ಉಚಿತ ಅವಕಾಶ ನೀಡಲಾಗಿದೆ ಎಂದು ಹೇಳಿದೆ.
ಎಎಸ್ಐ ಮುಖ್ಯಸ್ಥ ರಾಜ್ಕುಮಾರ್ ಪಟೇಲ್ ಈ ಬಗ್ಗೆ ನೀಡಿದ್ದು, ಯೊಗ ದಿನದ ಅಂಗವಾಗಿ ಪ್ರವಾಸಿಗರಿಗೆ ಉಡುಗೊರೆಯಾಗಿ ಉಚಿತ ಪ್ರವೇಶದ ಅನುಮತಿ ನೀಡಲಾಗಿದೆ. ತಾಜ್ಮಹಲ್ ಜತೆಗೆ ಆಗ್ರಾ ಕೋಟೆ ಹಾಗೂ ಫತೇಪುರ್ ಸಿಕ್ರಿ ಪ್ರವೇಶವೂ ಉಚಿತವಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಭಾರತೀಯರಿಗಷ್ಟೇ ಅಲ್ಲದೇ ವಿದೇಶಿ ಪ್ರವಾಸಿಗರಿಗೂ ಇದು ಅನ್ವಯವಾಗಲಿದೆ. ಇನ್ನು ಪಥೇಪುರ ಸಿಕ್ರಿಯಲ್ಲಿರುವ ಪಂಚ ಮಹಲ್ನಲ್ಲಿ ನೂರಾರು ಜನರು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು. (ಏಜೆನ್ಸೀಸ್)