

ಮುಂಬೈ: ಕೇಂದ್ರ ಸರ್ಕಾರ ಕಳೆದ ವರ್ಷ ನಿಷೇಧಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) 2047ರ ವೇಳೆಗೆ ಭಾರತದಲ್ಲಿ ‘ಇಸ್ಲಾಂ ಆಳ್ವಿಕೆ’ ಸ್ಥಾಪಿಸುವ ಗುರಿ ಹೊಂದಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹೇಳಿದೆ.
ತನ್ನ ಗುರಿಯನ್ನು ಸಾಧಿಸಲು ವಿದೇಶಗಳು ಮತ್ತು ಇತರೆ ಸಂಸ್ಥೆಗಳ ಸಹಾಯ ಪಡೆದು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪಡೆಯುವ ಯೋಜನೆಯನ್ನು ಅದು ಹೊಂದಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ದೇಶದ ವಿರುದ್ಧ ಸಮರ ಸಾರಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲಾದ ಐವರು ಪಿಎಫ್ಐ ಸದಸ್ಯರ ವಿರುದ್ಧ ಕಳೆದ ವಾರ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಎಟಿಎಸ್ ಈ ವಿಷಯ ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿದ ನಂತರ ಮಹಾರಾಷ್ಟ್ರ ಎಟಿಎಸ್, ಐವರು ಪಿಎಫ್ಐ ಸದಸ್ಯರಾದ ಮಜರ್ ಖಾನ್, ಸಾದಿಕ್ ಶೇಖ್, ಮೊಹಮ್ಮದ್ ಇಕ್ಬಾಲ್ ಖಾನ್, ಮೊಮಿನ್ ಮಿಸ್ತ್ರಿ ಮತ್ತು ಆಸಿಫ್ ಹುಸೇನ್ ಖಾನ್ ಅವರನ್ನು ಬಂಧಿಸಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ, ರಾಜ್ಯದ ವಿರುದ್ದ ಅಪರಾಧಗಳನ್ನು ಎಸಗಲು ಸಂಚು ರೂಪಿಸಿದಕ್ಕಾಗಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ.
ಆರ್ಎಸ್ಎಸ್ ವಿರುದ್ಧ ಷಡ್ಯಂತ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್ ) ಮೇಲ್ಜಾತಿ ಹಿಂದುಗಳ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಸಂಘಟನೆ ಎಂದು ಬಿಂಬಿಸುವ ಮೂಲಕ ಪಿಎಫ್ಐ ಹಲವಾರು ಸಮುದಾಯಗಳ ನಡುವೆ ಒಡಕು ಸೃಷ್ಟಿಸಲು ಬಯಸಿದೆ. ಆರೋಪಿಗಳು ತಮ್ಮ ಗುರಿಗಳನ್ನು ಸಾಧಿಸಲು ಹಲವಾರು ತರಬೇತಿ ಕೋರ್ಸ್ಗಳನ್ನು ಪಡೆದುಕೊಂಡಿದ್ದಾರೆ ಎಂದು ಎಟಿಎಸ್ ತಿಳಿಸಿದೆ. ಐಸಿಸ್ ನಂತಹ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿರುವ ಅರೋಪ ದಡಿ ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್ನಲ್ಲಿ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಿದೆ.
ದಾಖಲೆಯಲ್ಲಿ ಏನಿದೆ?
ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ದಾಖಲೆಯಲ್ಲಿ ಸರ್ಕಾರವನ್ನು ಉರುಳಿಸಲು ಪಿಎಫ್ಐ ಸದಸ್ಯರಿಗೆ ಮಾರ್ಗಸೂಚಿಯನ್ನು ಒದಗಿಸಲಾಗಿದೆ. ಬ್ರಿಟಿಷ್ ರಾಜ್ ಅನ್ಯಾಯವಾಗಿ ಕಸಿದುಕೊಂಡ ರಾಜಕೀಯ ಶಕ್ತಿ ಮುಸ್ಲಿಂ ಸಮುದಾಯಕ್ಕೆ ಮರಳಿ ಬರುವ 2047ರ ಕನಸನ್ನು ಕಾಣುತ್ತಿದ್ದೇವೆ ಎಂದು ಹೇಳಲಾಗಿದೆ. ಮಾರ್ಗಸೂಚಿಯ ಆರಂಭವು ಮುಸ್ಲಿಂ ಸಮುದಾಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯೊಂದಿಗೆ ಪ್ರಾರಂಭವಾಗುತ್ತದೆ. ಇದಕ್ಕಾಗಿ ಈಗಾಗಲೇ ಎಂಪವರ್ ಇಂಡಿಯಾ ಫೌಂಡೇಶನ್ ಹೆಸರಿನಲ್ಲಿ ಪ್ರತ್ಯೇಕ ಮಾರ್ಗಸೂಚಿ ಒದಗಿಸಲಾಗಿದೆ. ಮುಸ್ಲಿಂ ಸಮುದಾಯದ ಕುಂದು ಕೊರತೆಯನ್ನು ಪದೇ ಪದೆ ನೆನಪಿಸಬೇಕಾಗಿದೆ. ಪಕ್ಷ ಸೇರಿದಂತೆ ನಮ್ಮ ಎಲ್ಲ ಮುಂಚೂಣಿ ಸಂಸ್ಥೆಗಳು ಹೊಸ ಸದಸ್ಯರನ್ನು ವಿಸ್ತರಿಸುವ ಮತ್ತು ಸೇರ್ಪಡೆಗೊಳಿಸುವತ್ತ ಗಮನ ಹರಿಸಬೇಕಿದೆ ಎಂದು ದಾಖಲೆಯಲ್ಲಿ ಹೇಳಲಾಗಿದೆ.