

ಪಡುಬಿದ್ರಿ: ತುಮಕೂರಿನ ಕ್ಯಾತಸಂದ್ರದ ಮಹಿಳೆಯೊಬ್ಬರು ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ವಂಚಿಸಿರುವುದಾಗಿ ಆರೋಪಿಸಿ ಬೋಂಟಳಿಕೆ ನಿಡ್ಡೋಡಿಯ ಆರೋಪಿ ಚೇತನ್ ದೊಂಬಯ್ಯ ಪೂಜಾರಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯ ಪತಿ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. 2024ರಲ್ಲಿ ಬ್ಯೂಟಿಷಿಯನ್ ತರಬೇತಿಗೆ ಮಂಗಳೂರಿಗೆ ಬಂದಿದ್ದರು. ಈ ವೇಳೆ ಮಹಿಳೆ ವಾಸವಿದ್ದ ನೆರೆಮನೆಯ ಮಂಜುಳಾ ಎಂಬಾಕೆಯ ಸಂಬಂಧಿ, ಆರೋಪಿ ಚೇತನ್ ಪರಿಚಯವಾಗಿತ್ತು. 2025ರ ಮಾರ್ಚ್ನಲ್ಲಿ ಸೌತಡ್ಕ ಗಣಪತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ. ನಂತರ ದೈಹಿಕವಾಗಿ ಬಳಸಿಕೊಂಡಿದ್ದು, ತನ್ನನ್ನು ಮತ್ತು ಮಕ್ಕಳನ್ನು ಮನೆಯವರಿಗೆ ಪರಿಚಯಿಸುವಂತೆ ಹೇಳಿದಾಗ ನೆಪ ಹೇಳುತ್ತಿದ್ದ. ಜೂನ್ 20ರಂದು ಆರೋಪಿ ಚೇತನ್ ಮಂಗಳೂರಿನ ನೆಲ್ಲಿಕಾಯಿ ರಾಘವೇಂದ್ರ ಮಠದಲ್ಲಿ ಮತ್ತೆ ತಾಳಿ ಕಟ್ಟಿ ಆಕೆಯನ್ನು ತುಮಕೂರಿಗೆ ಕಳುಹಿಸಿದ್ದಾನೆ.
ಮಹಿಳೆ ಕಾನೂನುರೀತಿ ಮದುವೆಯಾಗುವಂತೆ ಒತ್ತಾಯಿಸಿದ್ದು, ಆರೋಪಿ ಚೇತನ್ ನಿರಾಕರಿಸಿದ್ದಾನೆ. ಆತ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಹಿಳೆಗೆ ಬೈದು ಹಲ್ಲೆಗೆ ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.