

ವಿಜಯವಾಣಿ ಸುದ್ದಿಜಾಲ ಉಡುಪಿ:
ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಪೋಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಆಗಸ್ಟ್ 21ರಂದು ಬೆಳಗ್ಗೆ ಬಂಧಿಸಿ ಕರೆ ತರಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿದಿದ್ದಾರೆ.
ಆ.16ರಂದು ಆರೋಪಿ ಮಹೇಶ ಶೆಟ್ಟಿ ತಿಮರೋಡಿ ಅವರು ತನ್ನ ಫೇಸ್ ಬುಕ್ ಪೇಜ್ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕುರಿತಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದರು. ಇದು ಹಿಂದು ಧರ್ಮದ ನಾಯಕನನ್ನು ಅವಹೇಳನ ಮಾಡಿ, ಅನ್ಯ ಧರ್ಮಗಳ ಹಾಗೂ ಸಮುದಾಯದ ನಡುವೆ ದ್ವೇಷ ಭಾವನೆ ಹಾಗೂ ವೈಮನಸ್ಸು ಉಂಟು ಮಾಡುತ್ತಿದೆ. ತಿಮರೋಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲದ ಅಧ್ಯಕ್ಷ ರಾಜೀವ ಕುಲಾಲ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಮಹೇಶ ತಿಮರೋಡಿ ಬಂಧನದ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆಯ ಬಳಿ ಹಾಗೂ ಬ್ರಹ್ಮಾವರ ಸಮುದಾಯ ಆಸ್ಪತ್ರೆಯ ಪರಿಸರದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಸ್ಥಳದಲ್ಲಿ ಹಾಗೂ ಪೊಲೀಸ್ ಠಾಣೆಯ ಬಳಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮಹೇಶ ಶೆಟ್ಟಿ ತಿಮರೋಡಿ ಅವರಿಗೆ ಬ್ರಹ್ಮಾವರ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಬ್ರಹ್ಮಾವರದ ಪೊಲೀಸರು ಬಿಗಿ ಬಂದೋಬಸ್ತ್ನಲ್ಲಿ ತಿಮರೋಡಿ ಅವರನ್ನು ಹಿರಿಯಡ್ಕ ಜೈಲಿಗೆ ಸ್ಥಳಾಂತರಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಆ.23ರಂದು ನಡೆಯಲಿದೆ.
* ಪೊಲೀಸ್ ಕರ್ತವ್ಯಕ್ಕೆ ಅಡ್ಡಿ* ಎಎಸ್ಪಿ ಕಾರಿಗೆ ಡಿಕ್ಕಿ, ಅಂಗರಕ್ಷಕನಿಗೆ ಗಾಯಉಡುಪಿ: ಮಹೇಶ ಶೆಟ್ಟಿ ತಿಮರೋಡಿ ಬಂಧನ ಖಂಡಿಸಿ ಅವರ ಬೆಂಬಲಿಗರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಾರ್ಕಳದಲ್ಲಿ ಗುರುವಾರ ಬೆಳಗ್ಗೆ ನಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಸೃಜನ್ ಎಲ್., ಹಿತೇಶ್, ಹಾಗೂ ಸಹನ್ ಎಂಬವರ ವಿರುದ್ಧ ಕಾರ್ಕಳದ ಎಎಸ್ಪಿಯ ಅಂಗರಕ್ಷಕ ಪ್ರಕಾಶ ಎಂಬವರು ದೂರು ದಾಖಲಿಸಿದ್ದಾರೆ.