

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಗ್ರಾಮದ ಜನರು ಮುಖ್ಯಪೇಟೆ ಪ್ರದೇಶ ಸಂಪರ್ಕಿಸಲು ಹಾಗೂ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲತೆಗೆ ಇರುವ ಗ್ರಾಮೀಣ ಭಾಗದ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ.
ಮುಂಡ್ಕೂರು ಗ್ರಾಪಂ ವ್ಯಾಪ್ತಿಯ ಜಾರಿಗೆಕಟ್ಟೆಯಿಂದ ಸಂಪರ್ಕ ಪಡೆಯುವ ಕಜೆ, ಬೋಳಪದವು ಮಾರ್ಗವಾಗಿ ಕೆದಿಂಜೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ಪ್ರಮುಖ ರಸ್ತೆ ಇತ್ತೀಚಿನ ಕೆಲ ವರ್ಷಗಳಿಂದ ತೀರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದೆ.
ವಾಹನ ಬರಲು ಹಿಂದೇಟು: ಈ ಭಾಗದ ರಸ್ತೆಯಲ್ಲಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನ ಓಡಾಡುತ್ತಿದ್ದು, ವಾಹನ ಸವಾರರು ಕಷ್ಟಪಟ್ಟು ವಾಹನ ಚಲಾಯಿಸುವಂತಾಗಿದೆ. ಅಲ್ಲದೆ ಈ ಭಾಗದ ರಸ್ತೆಯಲ್ಲಿ ರಿಕ್ಷಾ, ಕಾರಿನಂತಹ ಬಾಡಿಗೆ ವಾಹನ ಕೂಡ ಬರಲು ಹಿಂದೇಟು ಹಾಕುತ್ತಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಂಬರು ಕಿತ್ತು ನಿರ್ಮಾಣಗೊಂಡ ಬೃಹತ್ ಹೊಂಡಗಳಿಂದ ವಾಹನ ಸವಾರರು ಎಡವಟ್ಟು ಮಾಡಿಕೊಂಡು ವಾಹನಗಳು ಗುಜುರಿ ಸೇರುವಂತಾಗಿದೆ. ಹದಗೆಟ್ಟ ರಸ್ತೆಯಿಂದ ಬೈಕ್ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾದ ನಿದರ್ಶನವೂ ಸಾಕಷ್ಟಿದೆ.
ಕೆದಿಂಜೆಯಿಂದ ಸಂಪರ್ಕ ಪಡೆದು ಅಬ್ಬನಡ್ಕ, ಬೋಳಪದವು ಮಾರ್ಗವಾಗಿ ಸಾಗಿ ಜಾರಿಗೆಕಟ್ಟೆಗೆ ಸಂಪರ್ಕ ಸಾಧಿಸುವ ಒಳರಸ್ತೆಯಲ್ಲಿ ನಿತ್ಯ ನೂರಾರು ವಾಹನ ಓಡಾಡುತ್ತಿದ್ದು, ಇತ್ತೀಚಿನ ಕೆಲ ಸಮಯದಿಂದ ಹದಗೆಟ್ಟ ರಸ್ತೆ ಪರಿಣಾಮ ವಾಹನಗಳ ಸಂಖ್ಯೆ ತೀರ ಕಡಿಮೆಯಾಗಿದೆ. ನಿಟ್ಟೆ, ಕಾರ್ಕಳ ಭಾಗದ ಜನ ಮಂಗಳೂರಿನ ವಿಮಾನ ನಿಲ್ದಾಣ, ಕಟೀಲಿನ ಪುಣ್ಯ ಕ್ಷೇತ್ರ, ಕಿನ್ನಿಗೋಳಿ ಸಂಪರ್ಕಿಸಲು ಇದೇ ರಸ್ತೆ ಅವಲಂಭಿಸಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಪ್ರಮುಖ ಸಂಪರ್ಕ ರಸ್ತೆ.
ಬೋಳಪದವು, ಶೆಣೈ ಪದವು ಬಳಿಯಲ್ಲಿ ಸಾಕಷ್ಟು ಕೆಂಪುಕಲ್ಲಿನ ಕ್ವಾರಿಗಳಿದ್ದು ಇಲ್ಲಿಂದ ಲೋಡ್ ತುಂಬಿದ ಭಾರಿ ವಾಹನ ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಿರುವುದರ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೃಹತ್ ಗಾತ್ರದ ಹೊಂಡ ರಸ್ತೆಯುದ್ದಕೂ ನಿರ್ಮಾಣವಾಗಿದೆ.
ರಸ್ತೆ ನಿರ್ಮಾಣದ ಬಳಿಕ ವರ್ಷಗಳ ಹಿಂದೆ ತೇಪೆ ಕಾರ್ಯ ಮಾಡಿದ್ದು, ಇತ್ತೀಚೆಗೆ ರಸ್ತೆ ನಿರ್ವಹಣೆಯಲ್ಲಿ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡತ್ತಿಲ್ಲ. ನಿತ್ಯ ಈ ಭಾಗದ ಸಂಚಾರ ನಡೆಸುವ ಮಂದಿ ಸಂಕಟ ಅನುಭವಿಸುತ್ತಿದ್ದು, ಕೂಡಲೇ ಈ ಭಾಗದ ರಸ್ತೆ ತೇಪೆ ಹಾಕುವ ಮೂಲಕವಾದರೂ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಸ್ತೆಯೂ ತೀರ ಹದಗೆಟ್ಟಿದ್ದು, ವಾಹನ ಸಂಚಾರ ನಡೆಸುವುದೇ ಅಸಾಧ್ಯ. ಈಗಾಗಲೇ ಸಾಕಷ್ಟು ಸಣ್ಣಪುಟ್ಟ ವಾಹನ ಸವಾರರು ಬಿದ್ದು ಗಾಯಗೊಂಡ ನಿದರ್ಶನವೂ ಸಾಕಷ್ಟಿದೆ. ಕೂಡಲೇ ರಸ್ತೆ ಸರಿಪಡಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಸತೀಶ್ ಕುಮಾರ್ ವಾಹನ ಸವಾರ
ಕೆದಿಂಜೆಯಿಂದ ಜಾರಿಗೆಕಟ್ಟೆ ಸಾಗುವ ವರೆಗೂ ರಸ್ತೆಯೂ ತೀರ ಹದಗೆಟ್ಟಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡು ಗ್ರಾಮಸ್ಥರು ನಿತ್ಯ ಸಂಕಟ ಅನುಭವಿಸುವಂತಾಗಿದೆ. ಪ್ರೀತೇಶ್ ಗ್ರಾಮಸ್ಥರು