RCB : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೊದಲ ಸೀಸನ್ನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪ್ರಶಸ್ತಿಗಾಗಿ ಹೋರಾಡುತ್ತಿದೆ. ಈವರೆಗೂ ಹದಿನೇಳು ಸೀಸನ್ ಮುಕ್ತಾಯವಾಗಿದೆ. ಆದರೆ, ಆರ್‌ಸಿಬಿಯ ಆಸೆ ಮಾತ್ರ ಇನ್ನೂ ಕನಸಾಗೇ ಉಳಿದಿದೆ. ವಿರಾಟ್ ಕೊಹ್ಲಿಯಂತಹ ಸೂಪರ್‌ಸ್ಟಾರ್ ತಂಡದಲ್ಲಿದ್ದರೂ ಈವರೆಗೆ ಒಮ್ಮೆಯೂ ಟ್ರೋಫಿಯನ್ನು ಗೆಲ್ಲದಿರುವುದು ದುರಾದೃಷ್ಟವೇ ಸರಿ.
ಆರ್‌ಸಿಬಿ ಒಮ್ಮೆಯೂ ಟ್ರೋಫಿ ಗೆಲ್ಲದೇ ಇರುವುದಕ್ಕೆ ಮಾಜಿ ಆಟಗಾರ ಶಾಬಾದ್ ಜಕಾತಿ ಅಚ್ಚರಿಯ ಕಾರಣ ನೀಡಿದ್ದಾರೆ. ಬೆಂಗಳೂರು ಫ್ರಾಂಚೈಸಿ ತನ್ನ ಎಲ್ಲಾ ಆಟಗಾರರನ್ನು ಸಮಾನವಾಗಿ ಪರಿಗಣಿಸುವುದಿಲ್ಲ ಎಂದು ಶಾಬಾದ್ ಜಕಾತಿ ಆರೋಪ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಜಕಾತಿ, ಆರ್‌ಸಿಬಿ ಪರವೂ ಆಡಿದ್ದರು. 2014ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರು ಪರ ಜಕಾತಿ ಒಂದು ಪಂದ್ಯ ಆಡಿದ್ದರು.
ಇತ್ತೀಚೆಗೆ ಸ್ಪೋರ್ಟ್ಸ್‌ಕೀಡಾ ಮಾಧ್ಯಮಕ್ಕೆ ಸಂದರ್ಶನ ನೀಡಿದ ಜಕಾತಿ, ಹದಿನೇಳು ವರ್ಷಗಳಿಂದ ಆರ್‌ಸಿಬಿ ಏಕೆ ಪ್ರಶಸ್ತಿ ಗೆಲ್ಲಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು. ಇದು ತಂಡದ ಆಟ. ನಾವು ನಿಜವಾಗಿಯೂ ಟ್ರೋಫಿಗಳನ್ನು ಗೆಲ್ಲಲು ಬಯಸಿದರೆ, ಇಡೀ ತಂಡ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ಚೆನ್ನೈ ತಂಡ ಬಲಿಷ್ಠವಾಗಿರಲು ಕಾರಣವೆಂದರೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಆ ತಂಡದೊಂದಿಗೆ ಮುಂದುವರಿಯುತ್ತಾರೆ. ಅಷ್ಟೇ ಅಲ್ಲ, ಆ ತಂಡದಲ್ಲಿರುವ ವಿದೇಶಿ ಕ್ರಿಕೆಟಿಗರು ಸಹ ಸಮರ್ಪಣಾಭಾವದಿಂದ ಆಡುತ್ತಾರೆ. ತಂಡ ಯಶಸ್ವಿಯಾಗಬೇಕಾದರೆ, ಸಂಯೋಜನೆ ಸರಿಯಾಗಿರಬೇಕು. ನಾನು ಆರ್‌ಸಿಬಿ ಪರ ಆಡುತ್ತಿದ್ದಾಗ, ಆ ಫ್ರಾಂಚೈಸಿ ಕೇವಲ ಇಬ್ಬರು-ಮೂರು ಆಟಗಾರರ ಮೇಲೆ ಮಾತ್ರ ಗಮನಹರಿಸುತ್ತಿತ್ತು ಎಂದು ಜಕಾತಿ ಹೇಳಿದ್ದಾರೆ.
ಆಡಳಿತ ಮಂಡಳಿ ಮತ್ತು ಡ್ರೆಸ್ಸಿಂಗ್ ಕೋಣೆಯ ವಾತಾವರಣ ಸರಿಸಮಾನವಾಗಿರಲಿಲ್ಲ. ವಾಸ್ತವವಾಗಿ, ಆ ತಂಡದಲ್ಲಿ ಉತ್ತಮ ಆಟಗಾರರಿದ್ದರು. ಆದರೆ, ಅವರ ನಡುವೆ ಪರಸ್ಪರ ನಂಬಿಕೆ ಮತ್ತು ಸಹೋದರತ್ವದ ಕೊರತೆಯಿದೆ ಎಂದು ತೋರುತ್ತದೆ. ಆರ್‌ಸಿಬಿ ಆಟಗಾರರು ಸಿಎಸ್‌ಕೆಯಂತೆ ಪರಸ್ಪರ ಹೊಂದಿಕೊಳ್ಳುವುದಿಲ್ಲ ಎಂದು ನನಗೆ ಅನಿಸುತ್ತದೆ. ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಚೆನ್ನೈ ಕೂಡ ಬಲಿಷ್ಠವಾಗಿ ಕಾಣುತ್ತದೆ. ಈ ಎರಡು ತಂಡಗಳ ಜೊತೆಗೆ, ಗುಜರಾತ್ ಕೂಡ ಅಗ್ರ-4ಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ. ಆದರೆ, ಲಖನೌ ನಾಲ್ಕನೇ ತಂಡವಾಗುತ್ತದೆಯೇ? ಅಥವಾ ದೆಹಲಿ ಬರುತ್ತದೆಯೇ? ನಾನು ಖಚಿತವಾಗಿ ಹೇಳಲಾರೆ. ಈ ಬಾರಿ ದೆಹಲಿ ಉತ್ತಮ ತಂಡ. ಆದ್ದರಿಂದ ಆ ತಂಡ ಪ್ಲೇಆಫ್ ತಲುಪಿದರೆ ಆಶ್ಚರ್ಯವೇನಿಲ್ಲ. ಈ ಬಾರಿ ದೆಹಲಿ ಪ್ರಶಸ್ತಿ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶದಾಬ್ ಜಕಾತಿ ಬಹಿರಂಗಪಡಿಸಿದರು.
ಈ ಬಾರಿ ಆರ್‌ಸಿಬಿ ಪ್ಲೇಆಫ್ ತಲುಪುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಕನಿಷ್ಠ ವಿರಾಟ್ ಕೊಹ್ಲಿ ಸಲುವಾಗಿ ಅವರು ಟ್ರೋಫಿ ಗೆದ್ದರೆ ಒಳ್ಳೆಯದು. ಈ ಬಾರಿ ಕೊಹ್ಲಿ ಬದಲು ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಗೆಲ್ಲುತ್ತಾರೆ. ಮುಂಬೈ ಇಂಡಿಯನ್ಸ್‌ನ ವೇಗಿ ಜಸ್‌ಪ್ರೀತ್ ಬುಮ್ರಾ, ಪರ್ಪಲ್ ಕ್ಯಾಪ್ ಗೆಲ್ಲುತ್ತಾರೆ. ಸ್ಪಿನ್ನರ್‌ಗಳಲ್ಲಿ ಕುಲದೀಪ್ ಯಾದವ್ (ದೆಹಲಿ ಕ್ಯಾಪಿಟಲ್ಸ್) ಮತ್ತು ಯುಜ್ವೇಂದ್ರ ಚಾಹಲ್ (ಪಂಜಾಬ್ ಕಿಂಗ್ಸ್) ಅವರಿಗೆ ಅವಕಾಶವಿದೆ ಎಂದು ಜಕಾತಿ ಭವಿಷ್ಯ ನುಡಿದಿದ್ದಾರೆ.
ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಮೇ 25ಕ್ಕೆ ಫೈನಲ್ ಪಂದ್ಯದೊಂದಿಗೆ 18ನೇ ಆವೃತ್ತಿ ಮುಕ್ತಾಯವಾಗಲಿದೆ. (ಏಜೆನ್ಸೀಸ್)
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams
ಈ 3 ರಾಶಿಯವರು ತಮ್ಮ ತಾಯಂದಿರನ್ನು ದೇವತೆಯಂತೆ ನೋಡಿಕೊಳ್ಳುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs