ಸಿರಾಜ್​ಗೆ ಬೆಸ್ಟ್​ ಫೀಲ್ಡರ್​ ಅವಾರ್ಡ್​ ನೀಡಿದ ಪುಟ್ಟ ಅಭಿಮಾನಿ; ಹೃದಯಸ್ಪರ್ಶಿ ವಿಡಿಯೋ ವೈರಲ್

Mohammed Siraj
Published on

ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್​ನ 08ನೇ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ಐರ್ಲೆಂಡ್​ ವಿರುದ್ಧ 08 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವುದಾಗಿ ಎದುರಾಳಿ ತಂಡಗಳಿಗೆ ಸಂದೇಶ ರವಾನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್ಗಳು ಎದುರಾಳಿ ತಂಡವನ್ನು 97ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 98 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (52 ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್), ರಿಷಭ್ ಪಂತ್ (36 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ಗುರಿಯನ್ನು 12.2 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತ್ತು.

ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ನಡೆದ ಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೀಶೇಷ ಗೌರವ ನೀಡಲಾಯಿತು. ಈ ವೇಳೆ ಮೊಹಮ್ಮದ್​ ಸಿರಾಜ್​ಗೆ ಫೀಲ್ಟರ್​ ಆಫ್​ ದಿ ಮ್ಯಾಚ್​ ಮೆಡಲ್​ಅನ್ನು ನೀಡಲಾಯಿತು. ಈ ಪಂದ್ಯದಲ್ಲಿ 26 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಡೆಲಾನಿ ಯನ್ನು ರನೌಟ್ ಮಾಡುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೀಲ್ಡಿಂಗ್ ಕೋಚ್ ದಿಲೀಪ್, ಸಿರಾಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಸಿರಾಜ್​ಗೆ ಪ್ರಶಸ್ತಿ ನೀಡಲು ವಿಶೇಷ ಅತಿಥಿ ಆಗಮಿಸಿದ್ದರು.

ಈ ಪಂದ್ಯದ ರಾಷ್ಟ್ರೀಯ ಗೀತೆಯ ವೇಳೆ ಕಾಣಿಸಿಕೊಂಡಿದ್ದ ಪಂಜಾಬಿ ಪುಟಾಣಿಯನ್ನು ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಡ್ರೆಸ್ಸಿಂಗ್ ರೂಮ್​ಗೆ ಆಹ್ವಾನಿಸಿದ್ದರು. ಹೀಗೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡ ಸುಭೇಕ್ ಹೆಸರಿನ ಪುಟ್ಟ ಅಭಿಮಾನಿ ಮೊಹಮ್ಮದ್ ಸಿರಾಜ್​ಗೆ ಬೆಸ್ಟ್ ಫೀಲ್ಡರ್ ಮೆಡಲ್ ನೀಡಿದರು. ಮೆಡಲ್​ ಪಡೆದ ಬಳಿಕ ಹುಡುಗನನ್ನು ತಬ್ಬಿಕೊಂಡು ಸಂಭ್ರಮಿಸಿದ ಸಿರಾಜ್​ ಥ್ಯಾಂಕ್ಯೂ ಪಾಜಿ ಎಂದು ಪುಟಾಣಿಗೆ ಹೇಳಿದ್ದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಐರ್ಲೆಂಡ್​ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ಜೂನ್​ 09ರಂದು ಪಾಕಿಸ್ತಾನದ ವಿರುದ್ಧ ತನ್ನ ಲೀಗ್​ ಹಂತದ ಎರಡನೇ ಪಂದ್ಯವನ್ನು ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net