ವೈದ್ಯರಿಲ್ಲದೆ ಮರಣೋತ್ತರ ಪರೀಕ್ಷೆ ವಿಳಂಬ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಮನವಿ

kdp
ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಮೊದಲ ತಾಲೂಕು ಕೆಡಿಪಿ ಸಭೆ ನಡೆಯಿತು. ಶಾಸಕ ಉಮನಾಥ ಕೋಟ್ಯಾನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಾಯ್ಡ ಸಂದೀಪ್ ಡಿಸಿಲ್ವ, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ ಬಿ., ಕುಡಿಯುವ ನೀರು ಮತ್ತು ನೈರ್ಮಲ್ಯಕರಣದ ಇಂಜಿನಿಯರ್ ಎಂ.ಶಿವಣ್ಣ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದರಿಂದ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿದೆ. ಪೊಲೀಸ್ ಸಿಬ್ಬಂದಿ ನೇಮಕದ ಸಮಸ್ಯೆ ಹಾಗೂ ನೊಂದ ಸಂಬಂಧಿಕರು ಆಕ್ರೋಶಕ್ಕೊಳಗಾಗುತ್ತಾರೆ. ಹೀಗಾಗಿ ವೈದ್ಯರು ಕೇಂದ್ರ ಸ್ಥಳದಲ್ಲಿಯೇ ಇರುವಂತಹ ವ್ಯವಸ್ಥೆಯಾಗಬೇಕು ಎಂದು ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಹೇಳಿದರು.

ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ನಡೆದ ಮೊದಲ ತಾಲೂಕು ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕವಾಗಿದೆ. ಹೊಸ ಡಯಾಲಿಸಿಸ್ ಯಂತ್ರ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಎರಡು ವಾರದೊಳಗೆ ಕಾರ್ಯರೂಪಕ್ಕೆ ತರಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಹೇಳಿದರು.

ಮೂಡುಬಿದಿರೆ ಮೈನ್ ಶಾಲೆ, ಬೆಳುವಾಯಿ ಮೈನ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು ಹೊಸ ಕಟ್ಟಡಕ್ಕೆ ಬೇಡಿಕೆಯಿಡುತ್ತಿದ್ದಾರೆ. ಶಿಕ್ಷಣ ಇಲಾಖೆ ಹೊಸ ಕಟ್ಟಡಕ್ಕೆ ಅನುಮತಿ ನೀಡುತ್ತಿಲ್ಲ. ದುರಸ್ತಿಗೆ ಕಟ್ಟಡಗಳಿಲ್ಲ ಎಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಜಗದೀಪ್ ಅಸಹಾಯಕತೆ ತೋಡಿಕೊಂಡರು. ಹೆಚ್ಚು ವಿದ್ಯಾರ್ಥಿಗಳಿರುವಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಅನಿವಾರ್ಯ. ಲಭ್ಯವಿರುವ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಇಲಾಖೆಯಿಂದ ಅನುಮತಿ ದೊರಕಿಸಿಕೊಡುವಂತೆ ಶಾಸಕ ಉಮಾನಾಥ ಕೋಟ್ಯಾನ್ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.

ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ ಬಿ., ಕುಡಿಯುವ ನೀರು ಮತ್ತು ನೈರ್ಮಲ್ಯಕರಣದ ಇಂಜಿನಿಯರ್ ಎಂ.ಶಿವಣ್ಣ, ಸಹಾಯಕ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಶಿಶು ಅಭಿವೃದ್ಧಿ ಇಲಾಖೆಯ ಹರೀಶ ಕೆ., ಸಮಾಜ ಕಲ್ಯಾಣ ಇಲಾಖೆಯ ಪ್ರೀತಿ, ಪಶುವೈದ್ಯ ಇಲಾಖೆಯ ಡಾ.ಗುರುರಾಜ್, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ, ತಾಪಂ ಕಾರ‌್ಯನಿರ್ವಾಹಣಾಧಿಕಾರಿ ಲೋಕೇಶ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಡೆಗೋಡೆ ನಿರ್ಮಿಸಿ

ಮೂಡುಬಿದಿರೆಯಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದ ಸುಸಜ್ಜಿತ ಪ್ರವಾಸಿ ಮಂದಿರದ ಕಾಮಗಾರಿ ವಿಳಂಬದ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಾಯ್ಡ ಸಂದೀಪ್ ಡಿಸಿಲ್ವ ಅವರನ್ನು ಪ್ರಶ್ನಿಸಿದರು. ಮೊದಲ ಹಂತದಲ್ಲಿ 2 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದು, ಅನುದಾನ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಇದೇ ಪರಿಸ್ಥಿತಿಯಿದೆ ಎಂದು ಅಧಿಕಾರಿ ಉತ್ತರಿಸಿದರು. ಅಂಬೇಡ್ಕರ್ ಭವನದ ಜಾಗಕ್ಕೆ ಕನಿಷ್ಠ ತಡೆಗೋಡೆಯನ್ನಾದರೂ ನಿರ್ಮಿಸುವಂತೆ ಉಮಾನಾಥ ಕೋಟ್ಯಾನ್ ಸೂಚಿಸಿದರು.

ಡ್ರಗ್ಸ್‌ಗೆ ನಿಯಂತ್ರಣಕ್ಕೆ ಕ್ರಮ

ಮೂಡುಬಿದಿರೆ ಪರಿಸರದಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬರುತ್ತಿವೆ. ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳು ಇಲ್ಲಿರುವುದರಿಂದ ಡ್ರಗ್ಸ್‌ಗೆ ನಿಯಂತ್ರಣ ಹೇರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಶಾಸಕರು ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಿಬ್ಬಂದಿ ಕೊರತೆಯಿಂದ ಸಮಸ್ಯೆ

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈಗ ತಾನೊಬ್ಬನೇ ಕರ್ತವ್ಯದಲ್ಲಿದ್ದು, ಕೆಲವೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದೇನೆ. ಬಳಿಕ ಇಲಾಖೆಯಲ್ಲಿ ಸಿಬ್ಬಂದಿಯಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕೃಷಿ ಅಧಿಕಾರಿ ವಿ.ಎಸ್.ಕುಲಕರ್ಣಿ ಸಮಸ್ಯೆ ತೋಡಿಕೊಂಡರು. ಈ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸುವುದಾಗಿ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net