ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ಹೆಚ್​ಐವಿ ಪಾಸಿಟಿವ್; ಐವರನ್ನು ಅಧಿಕಾರಿಗಳು ಸಸ್ಪೆಂಡ್| HIV Positive

ವಿಜಯವಾಣಿ - 2025-10-26T182116.621
Published on

ರಾಂಚಿ: ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್​ನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಥಲಸ್ಸೆಮಿಯಾದಿಂದ ಬಳಲುತ್ತಿದ್ದ ಐದು ಮಕ್ಕಳಿಗೆ ಹೆಚ್​ಐವಿ ಪಾಸಿಟಿವ್(HIV Positive) ಕಂಡು ಬಂದ ನಂತರ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ ಜಿಲ್ಲಾ ಸಿವಿಲ್ ಸರ್ಜನ್ ಸೇರಿ ಐವರು ಅಧಿಕಾರಿಗಳನ್ನು ಭಾನುವಾರ(ಅ. 26) ಅಮಾನತು ಮಾಡಿ ಆದೇಶಿಸಿದ್ದಾರೆ.

ಪಶ್ಚಿಮ ಸಿಂಗ್‌ಭೂಮ್​ನ ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತ ರಕ್ತ ವರ್ಗಾವಣೆಯಾಗಿದೆ ಎಂದು ಏಳು ವರ್ಷದ ಥಲಸ್ಸೆಮಿಯಾ ರೋಗಿಯ ಕುಟುಂಬ ಆರೋಪಿಸಿತ್ತು. ಇಂದು ಭಾನುವಾರ ರಾಂಚಿಯ ಐದು ಸದಸ್ಯರ ವೈದ್ಯಕೀಯ ತಂಡ ನಡೆಸಿದ ತನಿಖೆಯಲ್ಲಿ ಇನ್ನೂ ನಾಲ್ಕು ಮಕ್ಕಳು ಎಚ್‌ಐವಿ ಪಾಸಿಟಿವ್ ಎಂದು ಕಂಡುಬಂದಿದೆ.

ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಚೈಬಾಸಾದಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಎಚ್ಐವಿ ಸೋಂಕಿತ ರಕ್ತ ವರ್ಗಾವಣೆಯ ವರದಿಗಳ ನಂತರ, ಪಶ್ಚಿಮ ಸಿಂಗ್ಭೂಮ್‌ನ ಸಿವಿಲ್ ಸರ್ಜನ್ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಲು ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರವು ಹೆಚ್​ಐವಿ ಪೀಡಿತ ಮಕ್ಕಳ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಮತ್ತು ಸೋಂಕಿತ ಮಕ್ಕಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ ಎಂದು ಹೇಳಿದ್ದಾರೆ.

ಕಲುಸಿತ ರಕ್ತ ಹೇಗೆ ಸಿಕ್ಕಿತ್ತು ಎಂಬ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಸರ್ಕಾರ ಆರೋಗ್ಯ ಸೇವೆಗಳ ನಿರ್ದೇಶಕ ಡಾ. ದಿನೇಶ್ ಕುಮಾರ್ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ವೈದ್ಯಕೀಯ ತಂಡವನ್ನು ರಚಿಸಿದ್ದು, ಆ ತಂಡ ಈ ಬಗ್ಗೆ ರಕ್ತ ಕೇಂದ್ರ, ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net