ಥಾಯ್ಲೆಂಡ್ ಓಪನ್‌ನಲ್ಲಿ ಅಶ್ವಿನಿ-ಸಾತ್ವಿಕ್ ಜೋಡಿಗೆ ಸೋಲು, ಭಾರತದ ಸವಾಲು ಕೂಡ ಅಂತ್ಯ

ashwini ponnappa for web
Published on

ಬ್ಯಾಂಕಾಕ್: ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಜೋಡಿ ಟೊಯೊಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ಹೋರಾಟದಲ್ಲಿ ಮುಗ್ಗರಿಸಿತು. ಪುರುಷರ ಡಬಲ್ಸ್ ವಿಭಾಗದಲ್ಲೂ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ನಿರಾಸೆ ಅನುಭವಿಸುವ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಕೂಡ ಅಂತ್ಯ ಕಂಡಿತು. ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರವೇ ಭಾರತದ ಹೋರಾಟ ಕೊನೆಗೊಂಡಿತ್ತು.

ಅಶ್ವಿನಿ ಜೋಡಿಗೆ ವೀರೋಚಿತ ಸೋಲು: ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ 20-22, 21-18, 12-21 ರಿಂದ ಅಗ್ರ ಶ್ರೇಯಾಂಕಿತ ಜೋಡಿ ಥಾಯ್ಲೆಂಡ್‌ನ ಡೆಚಾಪೊಲ್ ಪುವಾರಾನುಕೊ ಹಾಗೂ ಸಾಪ್ಸಿರೀ ತಾಯಿರಾಟಾನಾಚಾಯಿ ಎದುರು ವೀರೋಚಿತ ಸೋಲು ಕಂಡಿತು. 59 ನಿಮಿಷಗಳ ಕಾದಾಟದಲ್ಲಿ ಭಾರತದ ಜೋಡಿ ಆರಂಭಿಕ ಎರಡೂ ಗೇಮ್‌ಗಳಲ್ಲೂ ಭರ್ಜರಿ ನಿರ್ವಹಣೆ ತೋರಿ ಸಮಬಲ ಸಾಧಿಸಿದರೆ, ನಿರ್ಣಾಯಕ ಹಾಗೂ 3ನೇ ಗೇಮ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೂ ಕಡೇ ಹಂತದಲ್ಲಿ ಎಡವಿದ ಭಾರತದ ಜೋಡಿ ನಿರಾಸೆ ಕಂಡಿತು.

ಇದಕ್ಕೂ ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದ ಹೋರಾಟದಲ್ಲಿ ವಿಶ್ವ ನಂ.10 ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ 18-21, 18-21 ಮಲೇಷ್ಯಾದ ಜೋಡಿ ಆರೊನ್ ಚಿಯಾ ಹಾಗೂ ಸೊಹ ವೂಯಿ ಯಿಕ್ ಜೋಡಿ ಎದುರು 35 ನಿಮಿಷಗಳ ಕಾದಾಟದಲ್ಲಿ ನಿರಾಸೆ ಕಂಡಿತು. 2018, 2019ರಲ್ಲೂ ಇದೇ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಭಾರತದ ಜೋಡಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net