ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿ: ಪೊಲೀಸ್ ಅಧಿಕಾರಿಯನ್ನು ಕೊಂದು, ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ ಉಗ್ರರು| Terrorist Attack

Terror Strike
Published on

ಇಸ್ಲಾಮಾಬಾದ್​: ಬಲೂಚಿಸ್ತಾನ್ ಪ್ರಾಂತ್ಯದ ಕಚ್ಚಿ ಜಿಲ್ಲೆಯ ಭಾಗ್ ಪಟ್ಟಣದಲ್ಲಿ ಸೋಮವಾರ ತಡರಾತ್ರಿ 10 ಭಯೋತ್ಪಾದಕರು ಪೊಲೀಸ್ ಮತ್ತು ಅರೆಸೈನಿಕ ನೆಲೆಗಳ ಮೇಲೆ ಸಂಘಟಿತ ಉಗ್ರ ದಾಳಿ(Terrorist Attack) ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮೋಟಾರ್ ಸೈಕಲ್‌ಗಳಲ್ಲಿ ಬಂದ ಉಗ್ರರು

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಂಜೂರ್ ರೆಹಮಾನ್ ಪ್ರಕಾರ, ಸುಮಾರು 50 ಶಸ್ತ್ರಸಜ್ಜಿತ ಉಗ್ರರು ಮೋಟಾರ್ ಸೈಕಲ್‌ಗಳಲ್ಲಿ ಬಂದು ಮೊದಲು ಲೆವೀಸ್ (ಅರೆಸೈನಿಕ) ಟ್ರಕ್ ಮೇಲೆ ದಾಳಿ ಮಾಡಿದ್ದು, ನಂತರ ತಮ್ಮ ಶಸ್ತ್ರಾಸ್ತ್ರಗಳನ್ನು ಲೆವೀಸ್ ಠಾಣೆ, ಪೊಲೀಸ್ ಠಾಣೆ ಮತ್ತು ಹತ್ತಿರದ ನ್ಯಾಷನಲ್ ಬ್ಯಾಂಕ್ ಕಟ್ಟಡದ ಕಡೆಗೆ ತಿರುಗಿಸಿದ್ದಾರೆ.

ದಾಳಿಕೋರರು ಹಲವಾರು ಲೆವೀಸ್ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ಪಡೆಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಇದರ ಪರಿಣಾಮವಾಗಿ ಹಲವಾರು ಗಂಟೆಗಳ ಕಾಲ ಭೀಕರ ಗುಂಡಿನ ಚಕಮಕಿ ನಡೆದಿದೆ.

ಭೀಕರ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿ ಸಾವು, ಇಬ್ಬರು ಗಾಯ

ಗುಂಡಿನ ಚಕಮಕಿಯಲ್ಲಿ, ಸಬ್-ಇನ್ಸ್‌ಪೆಕ್ಟರ್ ಲುತಾಫ್ ಖೋಸಾ ಮಾರಣಾಂತಿಕವಾಗಿ ಗಾಯಗೊಂಡು ಸಾವನ್ನಪ್ಪಿದರು. ಘರ್ಷಣೆಯಲ್ಲಿ ಇತರ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡರು.

ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಎಸ್‌ಎಸ್‌ಪಿ ರೆಹಮಾನ್ ದೃಢಪಡಿಸಿದರು. ಒಬ್ಬರ ಶವವನ್ನು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ವಶಪಡಿಸಿಕೊಂಡಿದೆ, ಆದರೆ ಓಡಿಹೋದ ದಾಳಿಕೋರರು ಇನ್ನೊಂದನ್ನು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ.

6 ಕೈದಿಗಳ ಬಿಡುಗಡೆ, ಪೊಲೀಸ್ ಠಾಣೆ ಸುಟ್ಟು ಭಸ್ಮ

ಪೊಲೀಸ್ ಠಾಣೆಯಲ್ಲಿ ಬಂಧಿಸಲ್ಪಟ್ಟಿದ್ದ ಆರು ಕೈದಿಗಳನ್ನು ಬಿಡುಗಡೆ ಮಾಡುವುದು ಭಯೋತ್ಪಾದಕರ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅವ್ಯವಸ್ಥೆಯ ನಡುವೆಯು ದಾಳಿಕೋರರು ಕೈದಿಗಳನ್ನು ಬಿಡುಗಡೆ ಮಾಡಿ, ಠಾಣೆ ಮತ್ತು ಹಲವಾರು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ, ಕತ್ತಲೆಯ ಮರೆಯಲ್ಲಿ ಪರಾರಿಯಾಗಿದ್ದಾರೆ.

ಪೊಲೀಸ್ ಠಾಣೆ ಸಂಪೂರ್ಣವಾಗಿ ನಾಶವಾಯಿದೆ. ಆದರೆ ಬ್ಯಾಂಕ್ ಕಟ್ಟಡಕ್ಕೆ ಭಾರೀ ಹಾನಿಯಾಯಿತು. ದಾಳಿಕೋರರು ಭಾರೀ ಶಸ್ತ್ರಾಸ್ತ್ರಗಳು ಮತ್ತು ಬೆಂಕಿಯಿಡುವ ಸಾಧನಗಳನ್ನು ಬಳಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ

ಬಲೂಚಿಸ್ತಾನದ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯಲ್ಲಿ ಈ ದಾಳಿಯು ಮತ್ತೊಂದು ಉಲ್ಬಣವನ್ನು ಸೂಚಿಸುತ್ತದೆ. ಇಲ್ಲಿ ಭಯೋತ್ಪಾದಕ ಸಂಘಟನೆಗಳು ಕಾನೂನು ಜಾರಿ ಸಂಸ್ಥೆಗಳು ಮತ್ತು ಮೂಲಸೌಕರ್ಯಗಳ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ.

ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ ದೀರ್ಘಕಾಲದಿಂದ ದಂಗೆಯಿಂದ ಬಳಲುತ್ತಿದ್ದ ಈ ಪ್ರಾಂತ್ಯವು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಪ್ರಮುಖ ದಾಳಿಗಳಿಗೆ ಸಾಕ್ಷಿಯಾಗಿದೆ. ಇದು ದೇಶದ ಅತ್ಯಂತ ಅಸ್ಥಿರ ಪ್ರದೇಶಗಳಲ್ಲಿ ಒಂದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಹೊಸ ಸವಾಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net