

ವಿಶ್ವಸಂಸ್ಥೆ: ಭಯೋತ್ಪಾದನೆ, ಜನಾಂಗೀಯ ಹಿಂಸೆ, ಬಹುಸಂಖ್ಯಾತರ ಮೂಲಭೂತವಾದ, ರಹಸ್ಯ ಪರಮಾಣು ವ್ಯಾಪಾರ ಇವಿಷ್ಟೇ ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ಗಳಿಸಿಕೊಂಡಿರುವ ಹೆಗ್ಗಳಿಕೆ. ಇದು ಬಿಟ್ಟು ಜಗತ್ತಿಗೆ ತೋರಿಸುವುದಕ್ಕೆ ಪಾಕಿಸ್ತಾನದ ಬಳಿ ಏನೂ ಇಲ್ಲ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದೆ.
ವಿಶ್ವಸಂಸ್ಥೆಯ 75ನೇ ವರ್ಷಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ತಮ್ಮ ನಿರಂತರ ಆಪಾದನೆಯನ್ನು ಮುಂದುವರಿಸಿದ್ದರು. ಈ ಭಾಷಣಕ್ಕೆ ಉತ್ತರ ನೀಡುವ ಹಕ್ಕನ್ನು ಬಳಸಿಕೊಂಡ ಭಾರತದ ರಾಜತಾಂತ್ರಿಕ ಅಧಿಕಾರಿ ಮಿಜಿತೋ ವಿನಿಟೋ, ಆಕ್ರಮಣಕಾರಿ ಪ್ರತ್ಯುತ್ತರ ನೀಡಿದರು.
ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್ ಇಂದು ಮಾಡಿದ ಭಾಷಣ ನಾಟಕೀಯವಾದುದು ಮತ್ತು ವಿಷಕಾರುವ ಮನಸ್ಥಿತಿಯದ್ದು. ಭಾರತದ ಆಂತರಿಕ ವಿಚಾರವಾಗಿರುವ ಜಮ್ಮು-ಕಾಶ್ಮೀರದ ವಿಷಯವನ್ನು ಅವರು ತಮ್ಮ ಪ್ರೀರೆಕಾರ್ಡೆಡ್ ವಿಡಿಯೋ ಸಂದೇಶದ ಮೂಲಕ ಪ್ರಸ್ತುತಪಡಿಸಿದ್ದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಭಾರತದ ಪ್ರತಿನಿಧಿ ಮಿಜಿತೋ ವಿನಿಟೋ ಜನರಲ್ ಅಸೆಂಬ್ಲಿ ಹಾಲ್ ಬಿಟ್ಟು ಹೊರನಡೆದಿದ್ದರು.
ಇಮ್ರಾನ್ ಮಾತು ಮುಗಿದ ಬಳಿಕ ಉತ್ತರ ನೀಡುವ ಹಕ್ಕು ಬಳಿಸಿಕೊಂಡ ಮಿಜಿತೋ ವಿನಿಟೋ, ಈ ಸಭಾಂಗಣ ಜಗತ್ತಿಗೆ ಸಲಹೆ ನೀಡುವುದಕ್ಕೆ ಅಗತ್ಯ ಸಾಧನೆ ಮಾಡದೇ ಇರುವಂಥ, ಹೇಳಿಕೊಳ್ಳುವುದಕ್ಕೆ ಏನೂ ವಿಷಯಗಳಿಲ್ಲದ ವ್ಯಕ್ತಿಯ ನಾಟಕೀಯ ಮಾತುಗಳನ್ನು ಕೇಳಿದೆ. ಆ ಮಾತುಗಳಲ್ಲಿ ಸುಳ್ಳುಗಳನ್ನು, ತಪ್ಪು ಮಾಹಿತಿಗಳನ್ನು, ಯುದ್ಧೋನ್ಮಾದದ ಮತ್ತು ದ್ವೇಷವನ್ನು ಈ ಅಸೆಂಬ್ಲಿ ಮೂಲಕ ಹರಡುವ ಪ್ರಯತ್ನವನ್ನು ನಾವು ಕಾಣಬಹುದು. ಭಯೋತ್ಪಾದನೆ, ಜನಾಂಗೀಯ ಹಿಂಸೆ, ಬಹುಸಂಖ್ಯಾತರ ಮೂಲಭೂತವಾದ, ರಹಸ್ಯ ಪರಮಾಣು ವ್ಯಾಪಾರ ಇವಿಷ್ಟೇ ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ಗಳಿಸಿಕೊಂಡಿರುವ ಹೆಗ್ಗಳಿಕೆ. ಇದು ಬಿಟ್ಟು ಜಗತ್ತಿಗೆ ತೋರಿಸುವುದಕ್ಕೆ ಪಾಕಿಸ್ತಾನದ ಬಳಿ ಏನೂ ಇಲ್ಲ ಎಂದು ಸಾತ್ತ್ವಿಕ ಆಕ್ರೋಶ, ಅಸಮಾಧಾನವನ್ನು ಹೊರಹಾಕಿದರು. ಅಲ್ಲದೆ, ಪಾಕಿಸ್ತಾನ ಉಗ್ರರಿಗೆ ನೆರವು ನೀಡುತ್ತಿರುವ ವಿಷಯ, ಪಾಕ್ ಪ್ರಧಾನಿ ತಮ್ಮ ಸರ್ಕಾರ, ಸೇನೆ ಉಗ್ರರನ್ನು ಪೋಷಿಸುತ್ತಿರುವುದನ್ನು ಒಪ್ಪಿಕೊಂಡ ವಿಚಾರವನ್ನೆಲ್ಲ ಮತ್ತೆ ಅಸೆಂಬ್ಲಿಗೆ ನೆನಪಿಸಿದರು. (ಏಜೆನ್ಸೀಸ್)