ಪತ್ನಿ ಹತ್ಯೆ ಮಾಡಿ ಮೃತದೇಹಕ್ಕೆ ಹೂವಿನ ಹಾರವಿಟ್ಟು ಪೊಲೀಸ್​ ಠಾಣೆಗೆ ತೆರಳಿ ಶರಣಾದ ಪತಿ!

Wife
Published on

ಬೆಂಗಳೂರು: ಸಂಸಾರದಲ್ಲಿ ಅನುಮಾನ ಎಂಬ ಭೂತ ವಕ್ಕರಿಸಿದರೆ ಸಾಕು ಅಂದಿನಿಂದಲೇ ಸಂಸಾರದ ಸರ್ವನಾಶ ಆರಂಭ. ಅದು ಅಂತ್ಯವಾಗುವುದು ದುರಂತದಿಂದ. ಇದಕ್ಕೆ ಸಾಕ್ಷಿಯಾಗಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ.

ಪತ್ನಿಯ ಮೇಲಿನ ಅನುಮಾನದಿಂದ ಆಕೆಗೆ ತುಂಬಾ ಕಿರುಕುಳ ನೀಡುತ್ತಿದ್ದ ಪತಿ, ಕೊನೆಗೆ ಪ್ರಾಣವನ್ನೇ ತೆಗೆದಿದ್ದಾನೆ. ಕೊಲೆ ಮಾಡಿದ್ದಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೃತದೇಹಕ್ಕೆ ಹೂವಿನ ಹಾರವಿಟ್ಟು ನೇರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಸ್ವಾತಿ (38) ಕೊಲೆಯಾದ ಮಹಿಳೆ. ಈಕೆ ಪ್ರಕಾಶಂ ಜಿಲ್ಲೆಯ ಪುಲ್ಲಾಲಚೆರುವು ಮೂಲದ ಲಾರಿ ಚಾಲಕ ವೆಂಕಟ ಕೊಟಯ್ಯ ಎಂಬಾತನನ್ನು 17 ವರ್ಷದ ಹಿಂದೆ ಮದುವೆ ಆಗಿದ್ದಳು. ದಂಪತಿ ತೆನಾಲಿಯಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬ್ಯೂಟಿಷಿಯನ್​ ಕೋರ್ಸ್​ ಮಾಡುತ್ತಿದ್ದ ಮೃತ ಸ್ವಾತಿ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ತೆನಾಲಿಯ ಪಾಂಡುರಂಗಪೇಟೆಯಲ್ಲಿದ್ದ ದಂಪತಿ ಇತ್ತೀಚೆಗೆ ನಜರುಪೇಟೆಯಲ್ಲಿ ವಾಸವಿದ್ದರು. ಸ್ವಾತಿ ನಂಡ್ಲುಪೇಟೆಯಲ್ಲಿ ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು.

ಸ್ವಾತಿಗೆ ಬೇರೆ ವ್ಯಕ್ತಿಯ ಜತೆ ಅಕ್ರಮ ಸಂಬಂಧ ಇದೆ ಎಂದು ವೆಂಕಟ ಅನುಮಾನ ವ್ಯಕ್ತಪಡಿಸಿದ್ದ. ಇದೇ ವಿಚಾರಕ್ಕೆ ಪತ್ನಿಯ ಜೊತೆ ಆಗಾಗ ಜಗಳ ಆಡುತ್ತಿದ್ದ. ಇದರಿಂದಾಗಿ ಕೆಲವು ದಿನಗಳ ಹಿಂದೆ ಸ್ವಾತಿ ತನ್ನ ತವರಿಗೆ ತೆರಳಿದ್ದಳು. ಬಳಿಕ ಆಕೆಯ ಮನವೊಲಿಸಿ ವಾಪಸ್​ ಕರೆತಂದಿದ್ದ. ಆದರೆ, ಆತನ ಅನುಮಾನ ಮಾತ್ರ ಕಡಿಮೆ ಆಗಿರಲಿಲ್ಲ. ಬದಲಾಗಿ ಇನ್ನೂ ಜಾಸ್ತಿ ಆಯಿತು. ಹೀಗಾಗಿ ಮತ್ತಷ್ಟು ಕಿರುಕುಳ ಕೊಡಲು ಆರಂಭಿಸಿದ.

ಗುರುವಾರ ಸ್ವಾತಿ ಎಂದಿನಂತೆ ಬ್ಯೂಟಿ ಪಾರ್ಲರ್​ಗೆ ತೆರಳಿದ್ದಳು. ಈ ವೇಳೆ ಆಕೆಯೊಂದಿಗೆ ಜಗಳ ಶುರು ಮಾಡಿದ ವೆಂಕಟ, ಚಾಕುವಿನಿಂದ ಆಕೆಯ ದಾಳಿ ಮಾಡಿದ್ದ. ತೀವ್ರ ರಕ್ತಸ್ರಾವವಾಗಿ ಸ್ವಾತಿ ಸ್ಥಳದಲ್ಲೇ ಮೃತಪಟ್ಟಳು. ಇದಾದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾತಿ ಮೃತದೇಹಕ್ಕೆ ಹೂವಿನ ಹಾರ ಹಾಕಿದ ವೆಂಕಟ್​, ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net