

ಉಡುಪಿ: ಕರಾವಳಿಯಲ್ಲಿ ನಿನ್ನೆ ರಾತ್ರಿಯಷ್ಟೇ ಖಾಸಗಿ ಬಸ್ಸೊಂದು ಪಲ್ಟಿಯಾಗಿದ್ದು, ಇಂದು ಟೆಂಪೊ ಕೂಡ ಪಲ್ಟಿಯಾಗಿರುವ ಪ್ರಕರಣ ಸಂಭವಿಸಿದೆ. ಹದಿನೈದು ಜನ ಕಾರ್ಮಿಕರು ಪ್ರಯಾಣಿಸುತ್ತಿದ್ದ ಈ ಟೆಂಪೊ ಅಪಘಾತಕ್ಕೀಡಾಗಿ ಮಗುಚಿ ಬಿದ್ದಿದೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರ ಬೈಕಾಡಿ-ಬಿ.ಸಿ.ರೋಡ್ನಲ್ಲಿ ಈ ಅಪಘಾತ ಸಂಭವಿಸಿದೆ. ಈ ಟೆಂಪೊದಲ್ಲಿ ಕಾಂಕ್ರೀಟ್ ಕೆಲಸಗಾರರನ್ನು ತುಂಬಿಕೊಂಡಿದ್ದು, ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಾತ್ರವಲ್ಲ, ಟೆಂಪೊದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ಬಳಿಕ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು. ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರನ್ನು ಕಾನೂನುಬಾಹಿರವಾಗಿ ಈ ಟೆಂಪೊದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.