ಮಂದಿರ ಸ್ವಾತಂತ್ರ್ಯಕ್ಕೆ ಸ್ವಾಗತ: ಸಿಎಂ ನಿರ್ಧಾರಕ್ಕೆ ಹರ್ಷ; ರಾಜಕೀಯ ವಲಯದಲ್ಲಿ ಜಟಾಪಟಿ

Temple
Published on
ಸರ್ಕಾರದ ಆಡಳಿತಕ್ಕೊಳಪಟ್ಟಿರುವ ರಾಜ್ಯದ ಸುಮಾರು 34 ಸಾವಿರ ದೇವಾಲಯಗಳನ್ನು ಆಡಳಿತಾತ್ಮಕವಾಗಿ ಸ್ವತಂತ್ರಗೊಳಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಘೋಷಣೆಯನ್ನು ನಾಡಿನ ಸಾಧು ಸಂತರು ಸ್ವಾಗತಿಸಿದ್ದು, ಸರ್ಕಾರದ ನಿರ್ಧಾರ ದೇವಾಲಯಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಹೇಳಿಕೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.

ಬಹುಸಂಖ್ಯಾತ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿದ್ದ ಹಿಂದೂ ಧಾರ್ವಿುಕ ಸಂಸ್ಥೆಗಳ ಮೇಲಿನ ಸರ್ಕಾರದ ಹಿಡಿತವನ್ನು ಮುಕ್ತಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಹೇಳಿಕೆ ನೀಡಿದ್ದು, ಹಿಂದು ಧಾರ್ವಿುಕ ಸಂಸ್ಥೆಗಳ ಪಾಲಿಗೆ ಇದು ಐತಿಹಾಸಿಕ ನಿರ್ಣಯವಾಗಲಿದೆ. ಕೂಡಲೇ ಸರ್ಕಾರ ಆ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವಂತಾಗಲಿ. | ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಕಾಶೀ ಜಗದ್ಗುರುಗಳು ಹಿಂದು ದೇವಾಲಯಗಳನ್ನು ಮಾತ್ರ ಸರ್ಕಾರ ಸುಪರ್ದಿಗೆ ತೆಗೆದುಕೊಂಡ ಸಂದರ್ಭ ದಲ್ಲೇ ಧಾರ್ವಿುಕ ಮುಖಂಡರೆಲ್ಲ ಹಿಂದು ಧರ್ಮದ ಕ್ಷೇತ್ರಗಳು ಮಾತ್ರ ಏಕೆ ಎಂದು ಪ್ರಶ್ನಿಸಿದ್ದೆವು. ಇಂದು ಸರ್ಕಾರ ಉತ್ತರಿಸಿದೆ. ಇದು ಕೇವಲ ಹೇಳಿಕೆಯಾಗಿ ಉಳಿಯದೇ ಶೀಘ್ರ ಕಾರ್ಯರೂಪಕ್ಕೆ ಬರಬೇಕು. | ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಶ್ರೀಶೈಲ ಪೀಠ ಭಕ್ತರು ದೇವಸ್ಥಾನದ ಜೀಣೋದ್ಧಾರಕ್ಕೆ ಹಣ ನೀಡುತ್ತಾರೆ. ಆದರೆ ಆ ಹಣವನ್ನು ಅಧಿಕಾರಿಗಳು ಬೇರೆ ಕಾರ್ಯಕ್ಕೆ ಬಳಸುತ್ತಿದ್ದಾರೆ. ಅದಕ್ಕಾಗಿಯೇ, ದೇವಸ್ಥಾನಗಳನ್ನು ಬಿಟ್ಟುಕೊಡಿ ಎಂದು ಹಿಂದಿನಿಂದಲೂ ಕೇಳುತ್ತಿದ್ದೆವು. ಮೊದಲೆಲ್ಲ ದೇವಾಲಯದ ಹಣವನ್ನು ಹಜ್ ಯಾತ್ರೆಗೆ ಹೋಗುವವರಿಗೆ ಕೊಡುತ್ತಿದ್ದರು, ಈಗ ಬೇರೆ ಇಲಾಖೆಗಳಿಗೆ ನೀಡುತ್ತಿದ್ದಾರೆ. ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಠಿಯಿಂದ ಬಿಟ್ಟರೆ ಸಾಕು, ಭಕ್ತರೇ ತಸ್ತೀಕ್, ವೇತನ ಎಲ್ಲದರ ಹೊಣೆಯನ್ನೂ ನೋಡಿಕೊಳ್ಳುತ್ತಾರೆ. | ಶ್ರೀ ಶಾಂತವೀರ ಸ್ವಾಮೀಜಿ ಕೊಳದ ಮಠ ಹಿಂದೂ ಧಾರ್ವಿುಕ ಕ್ಷೇತ್ರಗಳಷ್ಟೇ ಅಲ್ಲದೆ ಲಿಂಗಾಯತರ ಶರಣರ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ಆಲೋಚನೆ ಮಾಡಲಿ. | ಬಸವಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ ಕೇಂದ್ರ ಪುರಾತತ್ವ ಇಲಾಖೆಯಡಿ ಸುಸ್ಥಿತಿಯಲ್ಲಿರುವ ದೇವಸ್ಥಾನಗಳನ್ನೂ ವಹಿಸಿ ಕೊಡಬೇಕು. ಸ್ಮಾರಕಗಳು ಎಂಬ ಹಣೆ ಪಟ್ಟಿ ಕಟ್ಟಿ ಅಲ್ಲಿ ಯಾವುದೇ ಅಭಿವೃದ್ಧಿ ಅಥವಾ ಕನಿಷ್ಠ ಸ್ವಚ್ಛತೆ ಇಲ್ಲದೆ ಬಿಡಾಡಿ ದನಗಳ ಹಾಗು ಪಿಕ್​ನಿಕ್ ಸ್ಥಳಗಳಾಗಿ ಮಾರ್ಪಟ್ಟಿವೆ. ಅಲ್ಲಿ ದೇವರಿಗೆ ದೀಪ ಬೆಳಗಿಸಲು, ಹೂವು ಇಡಲು ಅವಕಾಶ ಇಲ್ಲ. | ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠ ಹೊಂಬುಜ ಉತ್ಸವ ಮತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಸ್ವಾಗತಾರ್ಹವಾಗಿದೆ. ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸಬೇಕೆಂಬ ವರ್ಷಗಳ ಬೇಡಿಕೆಗೆ ಸಿಎಂ ಮಾತುಗಳು ಆಶಾದಾಯಕವಾಗಿವೆ. | ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಲಯ ಮಠ, ಪೀಠಾಧಿಕಾರಿ ಹಿಂದು ದೇವಾಲಯ ಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಿ, ಆದಾಯವನ್ನು ಅಲ್ಲಿನ ಅಭಿವೃದ್ಧಿಗೆ ಬಳಸಲು ಮುಂದಾ ಗಿರುವುದು ಸ್ವಾಗತಾರ್ಹ. ಶೀಘ್ರ ಕಾನೂನು ರೂಪಿಸಲಿ. | ಶ್ರೀ ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ದೇವಾಲಯಗಳ ಮೇಲಿನ ಹಿಡಿತ ಕೈಬಿಡುವ ಸರ್ಕಾರದ ನಿರ್ಧಾರ ಮಾದರಿಯಾಗಿದೆ. ಇದರಿಂದಾಗಿ ಭಕ್ತರು ನೀಡುವ ಕಾಣಿಕೆ ಆಯಾ ದೇವಾಲಯಕ್ಕೆ ಬಳಸಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಕೈಗೊಳ್ಳಲು ಸಹಕಾರಿಯಾಗಲಿದೆ. ದೀರ್ಘಕಾಲದ ಬೇಡಿಕೆಗೆ ಸರ್ಕಾರ ಈಗ ಸ್ಪಂದಿಸುತ್ತಿರುವುದು ದಿಟ್ಟ ಹಾಗೂ ಐತಿಹಾಸಿಕ ಹೆಜ್ಜೆಯಾಗಿದೆ. | ಡಾ.ಶರಣಬಸವಪ್ಪ ಅಪ್ಪ ಮಹಾ ದಾಸೋಹಿ ಶರಣ ಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಕಲಬುರಗಿ ದೇವಾಲಯದ ಹಣ ಇದ್ದರೂ ಅದನ್ನು ದೇಗುಲಕ್ಕೇ ಬಳಸಿಕೊಳ್ಳಲು ಈಗ ಅವಕಾಶವಿಲ್ಲ. ಸರ್ಕಾರ ಕೈ ಹಾಕದೆಯೇ ದೇವಸ್ಥಾನದಲ್ಲಿ ಭಕ್ತರೇ ಆಯ್ಕೆ ಮಾಡುವ ಸಮಿತಿ ರಚಿಸಲಾಗುತ್ತದೆ. ಸಮಿತಿಗೆ ಹೆಚ್ಚು ಅಧಿಕಾರ ಕೊಡುವ ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ಉಸ್ತುವಾರಿ ಇರುತ್ತದೆ. ದೇವಾಲಯದ ಹಣ ತೆಗೆದು ಬೇರೆ ಯಾವುದಕ್ಕೋ ಹಾಕಲು ಬರುವುದಿಲ್ಲ. ಇದು ಇನ್ನಷ್ಟೇ ನೀತಿ ನಿರೂಪಣೆ ಆಗಬೇಕಿದೆ | ಕೆ.ಎಸ್. ಈಶ್ವರಪ್ಪ ಸಚಿವ

ಕೈ ಆಕ್ಷೇಪ, ಬಿಜೆಪಿ ಸಮರ್ಥನೆ

ಬೆಂಗಳೂರು: ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸುವ ಸರ್ಕಾರದ ಆಶಯಕ್ಕೆ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್​ನಲ್ಲಿ ದ್ವಂದ್ವ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಮುಖವಾಗಿ ಮುಂದೇನಾಗಬಹುದೆಂದು ಊಹಿಸಿ ಕಳವಳ ವ್ಯಕ್ತಪಡಿಸಿವೆ. ಇದೇ ವೇಳೆ ಸರ್ಕಾರ ತನ್ನ ಆಶಯವನ್ನು ಸಮರ್ಥಿಸಿಕೊಂಡು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಹಿಂದುಗಳನ್ನ ಕಾಂಗ್ರೆಸ್ ಎರಡನೇ ದರ್ಜೆ ನಾಗರಿಕರ ತರ ನೋಡುತ್ತಿದೆ. ಶಾದಿ ಭಾಗ್ಯ ತಂದರು, ಹಿಂದೂಗಳ ಕಗ್ಗೊಲೆ ಮಾಡಿದರು. ಹಿಂದು ದೇವಾಲಯಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಅದಕ್ಕೆ ನಾವು ಸ್ವಾತಂತ್ರ್ಯ ನೀಡಲು ಸಿದ್ಧರಿದ್ದೇವೆ ಎಂದರು. ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಅತಿದೊಡ್ಡ ತಪ್ಪು ಮಾಡುತ್ತಿದೆ. ಸರ್ಕಾರದ ನಿಲುವು ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದರು.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಿಂದೂ ದೇವಾಲಯಗಳನ್ನು ಸರ್ಕಾರ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ನಮ್ಮ ತಕರಾರು ಖಂಡಿತಾ ಇಲ್ಲ. ಸಾರಾಸಗಟಾಗಿ ಎಲ್ಲ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net