ದೇವಾಲಯಗಳು ಸಾಂಸ್ಕೃತಿಕ ಕೇಂದ್ರದ ಜತೆ ಭಾವೈಕ್ಯತೆ ಸಂಕೇತ

25 CRP-1A
ಚನ್ನರಾಯಪಟ್ಟಣದ ಶ್ರೀ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ ಘಟಕದಿಂದ ಆಯೋಜಿಸಿದ್ದ ದೇವಾಲಯಗಳ ಇತಿಹಾಸ ಪರಿಚಯ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಕೆ.ಮಂಜುನಾಥ್ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎ.ಎಂ.ಜಯರಾಂ, ಪ್ರವೀಣ್, ನಿರುಷಾ,ವಿದ್ಯಾರ್ಥಿಗಳು ಇದ್ದರು.
Published on

ಚನ್ನರಾಯಪಟ್ಟಣ: ಪ್ರಾಚೀನ ದೇವಾಲಯಗಳು, ಪುರಾತನ ಇತಿಹಾಸವನ್ನು ತಿಳಿಸುತ್ತದೆ ಎಂದು ಆದಿಚುಂಚನಗಿರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಮಂಗಳವಾರ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಆಯೋಜಿಸಿದ್ದ ದೇವಾಲಯಗಳ ಇತಿಹಾಸ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಲಾ ಶಾಸನಗಳ ಸಂರಕ್ಷಣೆಯಾಗಬೇಕು. ಶಿಲಾಶಾಸನಗಳ ಅಧ್ಯಯನ ಸಂಶೋಧನೆಗಳಾಗಬೇಕು. ಶಾಸನಗಳೇ ದಾಖಲೆಗಳಾಗಿದ್ದು, ಹೊಯ್ಸಳ ಲಾಂಛನದ ಸೂಕ್ಷ್ಮತೆ ಅರಿತು ಸಂಶೋಧನೆ ನಡೆಯಲಿ ಎಂದರು.

ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ತಾಲೂಕು ಘಟಕದ ಖಜಾಂಚಿ ಎ.ಎಂ.ಜಯರಾಂ ಸ್ಥಳೀಯ ಇತಿಹಾಸ ಪರಿಚಯ ಮಾಡಿಕೊಟ್ಟು ರಾಜ್ಯದಲ್ಲೇ ಅತಿ ಹೆಚ್ಚು ದೇವಾಲಯ ಹೊಂದಿದ ತಾಲೂಕು ಇದಾಗಿದೆ. ಪಟ್ಟಣದ ಚನ್ನಕೇಶವ ದೇವಾಲಯ ಪಟ್ಟಣಕ್ಕೆ ಹೆಸರು ಬರಲು ಕಾರಣವಾಗಿದೆ. ನಿಂತ ಬಂಗಿಯ ಶಿವನ ವಿಗ್ರಹ ಇರುವ ಚಂದ್ರಮೌಳೇಶ್ವರ ದೇವಾಲಯ, ಗ್ರಾಮ ದೇವತೆ ಒಳಗೇರಮ್ಮ, ಕೊಳದ ಆಂಜನೇಯ, ಪಟ್ಟಣದ ಅಮಾನಿಕೆರೆ, ಶ್ರವಣಬೆಳಗೊಳದ ಚಿಕ್ಕಬೆಟ್ಟದ ಶಿಲಾ ಶಾಸನಗಳ ಬಗ್ಗೆ, ಹಾಗೂ ಕೆರೆಕಟ್ಟೆಗಳ ನಿರ್ಮಾಣ, ಮೈಸೂರು ಅರಸರ ಕೊಡುಗೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ, ದೇವಾಲಯಗಳು ಸಾಂಸ್ಕೃತಿಕ ಕೇಂದ್ರದ ಜತೆಗೆ ಭಾವೈಕ್ಯತೆಯ ಸಂಕೇತವು ಆಗಿತ್ತು ಎಂದು ವಿವರಿಸಿದರು.

ರೋವರ್ ಲೀಡರ್ ಪ್ರವೀಣ್, ರೇಂಜರ್ಸ್ ಲೀಡರ್ ನಿರುಷಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನೀತಿ ನಿಯಮ ಕರ್ತವ್ಯ ಪಾಲನೆ, ಶಿಸ್ತು, ದಕ್ಷತೆ ನಾಯಕತ್ವ ಗುಣ, ಮೌಲ್ಯಗಳನ್ನು ವೃದ್ಧಿಸುವ ಸಂಸ್ಥೆ ಇದಾಗಿದೆ. ಇತ್ತೀಚೆಗೆ ರಾಜ್ಯಪಾಲ ಪುರಸ್ಕಾರ ಪಡೆದ ಸ್ವಾತಿ, ಸಂದೀಪ್, ಹರ್ಷಿತಾ, ಯಶವಂತ್, ಹರೀಶ್, ರಾಕೇಶ್ ಅವರನ್ನು ಅಭಿನಂದಿಸಲಾಯಿತು.

ಚನ್ನಕೇಶವ ದೇವಾಲಯದಲ್ಲಿ ಸ್ವಚ್ಛತೆಗಾಗಿ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು. ದೇವಾಲಯದ ಪ್ರಧಾನ ಅರ್ಚಕ ಡಾ. ಸಿ ಎಸ್.ಶೇಷಶಯನ ದೇವಾಲಯದ ಪ್ರಾಚೀನತೆ, ಶಾಸನಗಳ ಬಗ್ಗೆ ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net