ತೆಲುಗು 'ಖರಾಬು' ಬಿಡುಗಡೆ ಆಯ್ತು ...

Telugu Karabu - Final
Published on

ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ 'ಖರಾಬು' ಹಾಡು ಕನ್ನಡದಲ್ಲಿ ಸೂಪರ್​ ಹಿಟ್​ ಆಗಿದೆ. ನಾಲ್ಕು ತಿಂಗಳುಗಳ ಹಿಂದೆ ಬಿಡುಗಡೆಯಾದ ಈ ಹಾಡು, ಈಗ ನೂರು ಮಿಲಿಯನ್​ ವ್ಯೂಸ್​ ದಾಖಲಿಸಿದೆ.

ಯಾವಾಗ ಕನ್ನಡದ ಹಾಡು ಯಶಸ್ವಿಯಾಯಿತೋ, 'ಖರಾಬು' ಹಾಡಿನ ತೆಲುಗು ವರ್ಷನ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದರು. ಅದರಂತೆ, ಇಂದು ಮಧ್ಯಾಹ್ನ, ತೆಲುಗಿನ 'ಪೊಗರು' ಚಿತ್ರದ 'ಖರಾಬು' ಹಾಡು ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

'ಪೊಗರು' ಚಿತ್ರವು ಕನ್ನಡವಲ್ಲದೆ ತೆಲುಗಿನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡೂ ಚಿತ್ರಗಳ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರವೇ ಬಿಡುಗಡೆಯಾಗಬೇಕಿತ್ತು. ಏಪ್ರಿಲ್​ ಕೊನೆ ಅಥವಾ ಮೇನಲ್ಲಿ ಚಿತ್ರ ಬಿಡುಗಡೆ ಎಂದು ಚಿತ್ರತಂಡ ಸಹ ಘೋಷಿಸಿತ್ತು.

ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿ, ಚಿತ್ರತಂಡದ ಕೆಲಸಗಳೆಲ್ಲಾ ನಿಂತುಹೋದವು. ಚಿತ್ರತಂಡ ಹೈದರಾಬಾದ್​ನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿತ್ತು. ಆದರೆ, ಲಾಕ್​ಡೌನ್​ ಘೋಷಣೆಯಿಂದ ಅದು ಕ್ಯಾನ್ಸಲ್​ ಆಯಿತು. ಇದೀಗ, ಲಾಕ್​ಡೌನ್​ ಎಲ್ಲಾ ಮುಗಿದು, ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗಿವೆ. ಆದರೆ, ಚಿತ್ರತಂಡ ಹೈದರಾಬಾದ್​ಗೆ ಹೋಗುವ ಬದಲು, ಇಲ್ಲೇ ಚಿತ್ರೀಕರಣ ಮುಗಿಸುವುದಕ್ಕೆ ಪ್ಲಾನ್​ ಮಾಡಿದೆ.

ಆಗಸ್ಟ್​ 15ರ ನಂತರ 'ಪೊಗರು' ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ನಡೆಯಲಿದ್ದು, ಧ್ರುವ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಎಲ್ಲಿ ಎಂಬ ವಿಷಯವನ್ನು ಚಿತ್ರತಂಡ ಇನ್ನೂ ಬಹಿರಂಗಗೊಳಿಸಿಲ್ಲ.

'ಪೊಗರು' ಚಿತ್ರದಲ್ಲಿ ಧ್ರುವ, ರಶ್ಮಿಕಾ ಮಂದಣ್ಣ ಮುಂತಾದವರು ನಟಿಸಿದ್ದು, ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ನಂದಕಿಶೋರ್. ಚಿತ್ರಕ್ಕೆ ಅರ್ಜುನ್​ ಜನ್ಯ ಅವರ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net