ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿ

Telugu Actress Pavala Syamala Feeling Sad Video Gone Viral
Published on

ಹೈದ್ರಾಬಾದ್​​: ತೆಲುಗು ಸಿನಿಮಾ ಕ್ಷೇತ್ರದಲ್ಲಿ ಒಂದಾನೊಂದು ಕಾಲದಲ್ಲಿ ಮಿಂಚಿದ್ದ  ಜನಪ್ರಿಯ  ನಟಿ 'ಪಾವಲಾ ಶ್ಯಾಮಲಾ.  ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್‌ನಿಂದ ಹಿಡಿದು ಈಗಿನ ಸ್ಟಾರ್‌ಗಳಾದ ಎನ್‌ಟಿಆರ್, ಗೋಪಿಚಂದ್ ಮತ್ತು ನಾನಿ, ಚಿತ್ರಗಳಲ್ಲಿಯೂ ನಟಿಸಿರುವ ಪಾವಲಾ ಶ್ಯಾಮಲಾ ಅವರು ಪ್ರಸ್ತುತ ವೃದ್ಧಾಶ್ರಮದಲ್ಲಿ ದಾರುಣ ಸ್ಥಿತಿಯಲ್ಲಿದ್ದಾರೆ. ಈ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಆಡಿರುವ ಮಾತುಗಳು ಸಖತ್​ ವೈರಲ್​ ಆಗುತ್ತಿದೆ.

ಶ್ಯಾಮಲಾ ಟಿವಿ ಕಾರ್ಯಕ್ರಮವೊಂದಕ್ಕೆ ಬಂದು ತಮ್ಮ ನೋವಿನ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಈಗ ಆಕೆ ನಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ನಟಿಯಾಗಿ ಬ್ಯುಸಿ ಲೈಫ್ ಹೊಂದಿದ್ದ ಪಾವಲಾ ಶ್ಯಾಮಲಾ ಸದ್ಯ ಅನಾರೋಗ್ಯ ಹಾಗೂ ವಯಸ್ಸಾಗಿರುವ ಕಾರಣದಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇತ್ತೀಚೆಗೆ ಜನಪ್ರಿಯ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ಯಾಮಲಾ ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಪಾವಲ ಶ್ಯಾಮಲಾ ಮಾತನಾಡಿ.. “ನಾನು ಎಲ್ಲ ಹೀರೋಗಳ ಜೊತೆ ನಟಿಸಿದ್ದೇನೆ. ಎಲ್ಲ ಹಿಟ್ ಸಿನಿಮಾಗಳಲ್ಲಿ ನಾನಿದ್ದೇನೆ. ಆದರೆ ಕೊನೆಯಲ್ಲಿ, ನನ್ನ ಜೀವನ ಈ ರೀತಿ ಆಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ.‘ ಬೇಸರ ವ್ಯಕ್ತ ಪಡಿಸಿದ್ದಾರೆ.

ನಾಟಕದಲ್ಲಿ ಮಿಂಚಿದ್ದೆ. ನಾನು ಅನೇಕ ಗೌರವಗಳನ್ನು ಪಡೆದಿದ್ದೇನೆ. ನಾಟಕಗಳು ಕಡಿಮೆಯಾದಂತೆ ಪ್ರಶಸ್ತಿಗಳನ್ನೆಲ್ಲ ಮಾರಿ ಚಿತ್ರರಂಗಕ್ಕೆ ಬಂದೆ. ಎಲ್ಲ ನಾಯಕರ ಜತೆ ನಟಿಸಿದ್ದೇನೆ. ನನ್ನ ಕಷ್ಟಗಳನ್ನು ಹೇಳಿಕೊಂಡು ನಿಮ್ಮನ್ನು ನೋಯಿಸಲು ನಾನು ಮತ್ತೆ ನಿಮ್ಮ ಬಳಿಗೆ ಬಂದಿಲ್ಲ. ಇನ್ನೊಮ್ಮೆ ನಿಮ್ಮನ್ನು ನೋಡಲು ಬದುಕುವೆನೋ ಎಂಬ ಆಸೆಯಲ್ಲಿ ಈಗ ಒಮ್ಮೆ ನಿಮ್ಮನ್ನು ನೋಡಿ ಕೃಪೆಗೆ ಪಾತ್ರನಾಗಲು ಬಂದಿದ್ದೇನೆ. ನಾನು ಯಾವಾಗ ಸಾಯುತ್ತೇನೆ ಎಂದು ನನಗೆ ತಿಳಿದಿಲ್ಲ. ಅದಕ್ಕೇ ನಿಮ್ಮನ್ನು ನೋಡಲು ಬಂದೆ ” ಎಂದು ಹೇಳಿದ ಅವರ ಮಾತು ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.

ಶ್ಯಾಮಲಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಯಿತು. ನಡೆಯಲು ಅಶಕ್ತರಾಗಿರುವ ಪಾವಲ ಶ್ಯಾಮಲಾ ಅವರು ಗಾಲಿಕುರ್ಚಿಯಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net