ಎಷ್ಟು ಗೋಗರೆದ್ರೂ ಪ್ರೀತಿಸಲು ಒಪ್ಪದ ಯುವತಿ: ಯೂಟ್ಯೂಬ್​ ನೋಡಿ ಸಂಚು ರೂಪಿಸಿದ ಪ್ರಿಯಕರ!

Youtube Plan
Published on

ಹೈದರಾಬಾದ್​: ಹೇಗಾದರೂ ಮಾಡಿ ತನ್ನನ್ನು ಪ್ರೀತಿಸುವಂತೆ ಯುವತಿಯ ಮನವೊಲಿಸಬೇಕೆಂದು ಆಕೆ ಹೋದ ಕಡೆಯಲೆಲ್ಲ ಹಿಂದೆ ಬಿದ್ದಿದ್ದ ಯುವಕನ ಪ್ರೀತಿಯನ್ನು ಎರಡು ಮಾತಾಡದೇ ಯುವತಿ ನಿರಾಕರಿಸುತ್ತಾಳೆ. ಇಷ್ಟಕ್ಕೆ ಸುಮ್ಮನಾಗದ ಯುವಕ ಆಕೆಯನ್ನು ಪಡದೇ ತೀರಬೇಕೆಂಬ ಹಠಕ್ಕೆ ಬಿದ್ದು ಕೊನೆಗೆ ಆತ ಆಯ್ದುಕೊಂಡ ದಾರಿಯಿಂದಾಗಿ ಇಂದು ಜೈಲು ಸೇರಿರುವ ಘಟನೆ ತೆಲಂಗಾನದ ನಲ್ಗೊಂಡ ಜಿಲ್ಲೆಯಲ್ಲಿ ವರದಿಯಾಗಿದೆ.

ಮುರಳಿ ಬಂಧಿತ ಯುವಕ. ತಪ್ಪಾದ ಕರೆಯಿಂದಾಗಿ ಮುರಳಿಗೆ ಕೆಲವು ದಿನಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗುತ್ತದೆ. ನಂತರ ಆಗಾಗ ಕರೆ ಮಾಡುವ ಮೂಲಕ ಒಬ್ಬರಿಗೊಬ್ಬರು ಫ್ರೆಂಡ್ಸ್​ಗಳಾಗುತ್ತಾರೆ. ಹೀಗಿರುವಾಗ ಮುರಳಿಗೆ ಆಕೆಯ ಮೇಲೆ ಮನಸ್ಸಾಗಿ ಪ್ರೀತಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ, ಅದನ್ನು ಆಕೆ ನಯವಾಗಿಯೇ ನಿರಾಕರಿಸುತ್ತಾಳೆ.

ಇಷ್ಟಕ್ಕೆ ಸುಮ್ಮನಾಗದ ಯುವಕ ಆಕೆಯ ಹಿಂದೆ ನೆರಳಿನಂತೆ ಬೀಳುತ್ತಾನೆ. ಪ್ರೀತಿಸುವಂತೆ ತುಂಬಾ ಕಾಡಿಸುತ್ತಾನೆ. ಈ ಸಂದರ್ಭದಲ್ಲಿ ಯುವತಿಗೆ ಬೇರೊಬ್ಬರ ಜತೆಯಲ್ಲಿ ಮದುವೆ ಆಗುತ್ತದೆ. ಈ ವಿಚಾರ ಮುರಳಿಗೆ ತಿಳಿದು, ಆಂತಕಕ್ಕೀಡಾಗುತ್ತಾನೆ. ಅಲ್ಲದೆ, ಯುವತಿಯ ಗಂಡನಿಗೆ ಕರೆ ಮಾಡಿ ಬೆದರಿಕೆ ಸಹ ಹಾಕುತ್ತಾನೆ.

ತನ್ನ ಕುಚೇಷ್ಟೆಯನ್ನು ಇಲ್ಲಿಗೆ ನಿಲ್ಲಿಸದ ಮುರಳಿ, ಮುಂದೆ ತಾನು ಆಯ್ದುಕೊಳ್ಳುವ ದಾರಿ ವಾಮಾಚಾರ. ಅತೀಂದ್ರಿಯ ಶಕ್ತಿಯ ಮೂಲಕ ಆಕೆಯನ್ನು ಹೊಲಿಸಿಕೊಳ್ಳುವ ದುಷ್ಕೃತ್ಯಕ್ಕೆ ಇಳಿಯುತ್ತಾನೆ. ಆಕೆಯ ಮನೆಯ ಮುಂದೆ ನಿಂಬೆ ಹಣ್ಣು, ಕೇಸರಿ, ಚಿಂದಿ ಬಟ್ಟೆ ಹಾಗೂ ಮೂಳೆಗಳು ಸೇರಿದಂತೆ ಮುಂತಾದ ಭಯ ಹುಟ್ಟಿಸುವಂತಹ ವಸ್ತುಗಳನ್ನು ಎಸೆಯುತ್ತಾನೆ. ಇದನ್ನು ನೋಡಿದ ಯುವತಿಗೆ ಅಕ್ಷರಶಃ ಗಾಬರಿಯಾಗುತ್ತದೆ.

ಇತ್ತ ಮುರಳಿಯ ವರ್ತನೆಯಿಂದ ಬೇಸತ್ತ ಯುವತಿ ಪೊಲೀಸ್​ ಠಾಣೆಗೆ ದೂರು ನೀಡುವುದನ್ನು ಬಿಟ್ಟರೆ, ಆತನಿಗೆ ಬುದ್ಧಿ ಕಲಿಸಲು ಬೇರೆ ಯಾವುದೇ ದಾರಿಯಿಲ್ಲ ಎಂಬ ನಿರ್ಧಾರಕ್ಕೆ ಬಂದು ದೂರು ನೀಡುತ್ತಾಳೆ. ತಕ್ಷಣ ಪೊಲೀಸರು ಮುರಳಿಯನ್ನು ಬಂಧಿಸುತ್ತಾರೆ. ಬಳಿಕ ವಿಚಾರಣೆ ನಡೆಸುವ ಪೊಲೀಸರಿಗೆ ಆತ ಹೇಳಿದ್ದನ್ನು ಕೇಳಿ ಒಂದು ಕ್ಷಣ ದಿಗ್ಭ್ರಾಂತರಾಗುತ್ತಾರೆ. ತಾನು ಯೂಟ್ಯೂಬ್​ ಚಾನೆಲ್​ ನೋಡಿ ವಾಮಾಚಾರ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net