

ಬೆಂಗಳೂರು: ಚಾಲೆಂಜಿಂಗ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಮುಂದಿಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತಷ್ಟು ಬೆಳವಣಿಗೆಗಳು ಈ ಪ್ರಕರಣದಲ್ಲಿ ಆಗಿದೆ.
ಪ್ರಕರಣದ ಪ್ರಮುಖ ಕೇಂದ್ರ ಬಿಂದುವೇ ಈ ಅರುಣಾ ಕುಮಾರಿ. ಈಕೆಯೇ ಮೋಸ ಮಾಡಲು ಯತ್ನಿಸಿದಳಾ? ಎಂಬ ಅನುಮಾನ ಮೂಡಿದೆ. ಏಕೆಂದರೆ ಆಕೆಯ ಹಿನ್ನೆಲೆಯನ್ನು ನೋಡಿದರೆ ಅವಳೊಬ್ಬಳು ಖತರ್ನಾಕ್ ಲೇಡಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈಗಾಗಲೇ ಅನೇಕರಿಗೆ ಅರುಣಾ ಕುಮಾರಿ ಮೋಸ ಮಾಡಿರುವ ಆರೋಪಗಳು ಕೇಳಿಬಂದಿದೆ. ಅಸಲಿಗೆ ಆರೋಪಿ ರೋಲ್ಕಾಲ್ ಗಿರಾಕಿ ಎಂಬ ಮಾತುಗಳು ಕೇಳಿಬಂದಿವೆ. ಫೇಸ್ಬುಕ್ ಮತ್ತು ಮೆಸೆಂಜರ್ ಮೂಲಕ ಜನರಿಗೆ ಆರೋಪಿ ಗಾಳಾ ಹಾಕುತ್ತಿದ್ದಳಂತೆ. ಬಳಿಕ ಮಳ್ಳಿಯಂತೆ ಮಾತನಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತನ್ನ ಫೇಸ್ಬುಕ್ ಖಾತೆಯ ಫ್ರೆಂಡ್ಸ್ ಲೀಸ್ಟ್ನಲ್ಲಿದ್ದವರ ಬಳಿಯೂ ಈಕೆ ಹಣವನ್ನು ಕೇಳುತ್ತಿದ್ದಳು ಎನ್ನಲಾಗಿದೆ. ಹಣ ಕೊಟ್ಟರೆ ಫ್ರೆಂಡ್ಶಿಫ್, ಇಲ್ಲವಾದ್ರೆ ಅವರ ಫ್ರೆಂಡ್ಶಿಫ್ಗೆ ಬ್ರೇಕ್ ಹಾಕ್ತಿದ್ದಳಂತೆ. ಫೇಸ್ಬುಕ್ನಲ್ಲಿ ಚೆಂದ..ಚೆಂದ ಫೋಟೋ ಅಪ್ಲೋಡ್ ಮಾಡಿ, ಪಡ್ಡೆ ಹುಡುಗರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಂಡು ಚಾಟ್ ಮೂಲಕ ಸಲುಗೆ ಬೆಳೆಸಿಕೊಂಡು ಹಣ ಕೇಳುತ್ತಿದ್ದಳು ಎಂಬ ಆರೋಪವಿದೆ. ಆಕೆ ಫ್ರೆಂಡ್ಸ್ ಲಿಸ್ಟ್ನಲ್ಲಿ 2500 ಹುಡುಗರು ಇರುವುದು ಬೆಳಕಿಗೆ ಬಂದಿದೆ.
ಈಕೆ ಗಾಳಕ್ಕೆ ಸಿಲುಕಿ ಹಲವು ಯುವಕರು ಹಣ ಕಳೆದುಕೊಂಡಿರುವ ಶಂಕೆ ಕೂಡ ಈಗ ವ್ಯಕ್ತವಾಗಿದೆ. ಅಲ್ಲದೆ, ಅನೇಕ ನಕಲಿ ಫೇಸ್ಬುಕ್ ಖಾತೆಗಳನ್ನು ಸಹ ಅರುಣಾ ಕುಮಾರಿ ತೆರೆದಿದ್ದಾರೆ ಎಂಬುದು ಪೊಲೀಸ್ ತನಿಖೆಯ ವೇಳೆ ಬಯಲಾಗಿದೆ. ಪ್ರಕರಣದಲ್ಲಿ ಅರುಣಾ ಕುಮಾರಿ ಹಿನ್ನೆಲೆಯನ್ನು ಪೊಲೀಸರು ಕೆದಕಿದಾಗ ಈ ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ. ಇದೀಗ ಇಡೀ ಪ್ರಕರಣ ಅರುಣಾ ಕುಮಾರಿಯ ಮೇಲೆ ಕೇಂದ್ರೀಕೃತವಾಗಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್)