ಹಾಸ್ಟೆಲ್​ನಲ್ಲಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಹೊರಟ್ಟಿದ್ದ ದಂಪತಿ ಮಾರ್ಗಮಧ್ಯೆ ದುರಂತ ಸಾವು

Couple Death
Published on

ಹೈದರಾಬಾದ್​: ಹಾಸ್ಟೆಲ್​ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಬೈಕ್​ನಲ್ಲಿ ಹೊರಟ ದಂಪತಿ ದುರಂತ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ರಂಗಾರೆಡ್ಡಿ ಜಿಲ್ಲೆ ಶಮ್ಶಾಬಾದ್​ ಮಂಡಲದ ಪೆದ್ದಾಶಪುರ್​ನಲ್ಲಿರುವ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.

ಈ ಬಗ್ಗೆ ಪೆದ್ದಾಶಪುರ್​ ಠಾಣಾ ಇನ್ಸ್​ಪೆಕ್ಟರ್​ ಶ್ರೀಧರ್​ಕುಮಾರ್​ ಮಾಹಿತಿ ನೀಡಿದ್ದು, ಫರೂಖ್​ನಗರ ಮಂಡಲದ ಕಾದಿ ಯಲಕುಂಟ ಗ್ರಾಮದ ಗೋಪಾಲ್​ (47) ಮತ್ತು ಅಂಜಲಿ (42) ದಂಪತಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ.

ಮೂರನೇ ಮಗಳು ಮಧುಲತಾ, ಛಂಪಾಪೇಟೆ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ವಿದ್ಯಾಭಾಸ ಮಾಡುತ್ತಿದ್ದಾಳೆ. ಆಕೆಯನ್ನು ನೋಡಲೆಂದು ಗೋಪಾಲ್​ ಮತ್ತು ಅಂಜಲಿ ತಮ್ಮ ಕಿರಿಯ ಮಗಳು ಸ್ವಾತಿ (9) ಜೊತೆಗೆ ಬೈಕ್​ನಲ್ಲಿ ತೆರಳಿದ್ದರು. ಈ ವೇಳೆ ಪೆದ್ದಾಶಪುರ್ ಪಟ್ಟಣದಲ್ಲಿ ಕ್ಯಾಂಟರ್​ ಒಂದು ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ದಂಪತಿ ತೆರಳುತ್ತಿದ್ದ ಬೈಕ್​ಗೆ ಗುದ್ದಿದೆ. ಪರಿಣಾಮ ಮಗಳ ಸಮೇತ ದಂಪತಿ ಕೆಳಗೆ ಬಿದ್ದು, ದುರಂತ ಸಾವಿಗೀಡಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹಗಳನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕ್ಯಾಂಟರ್​ ವಾಹನದ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net