ತೆಲಂಗಾಣ ಸಿಎಂ ವಿಶ್ವ ಸುಂದರಿ ಸ್ಪರ್ಧೆ ಮೇಲೆ ಗಮನ ಹರಿಸಿದ್ದಕ್ಕೆ ರಸಗೊಬ್ಬರ ಸಮಸ್ಯೆ; ಟಿ ಹರೀಶ್ ರಾವ್| T Harish Rao

T Harish Rao
Published on

T Harish Rao: ದೇಶದ ಹಲವು ರಾಜ್ಯಗಳಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಉದ್ಭವಿಸಿದೆ. ಆದರೆ ತೆಲಂಗಾಣದಲ್ಲಿ ರಸಗೊಬ್ಬರ ಸಮಸ್ಯೆ ಉದ್ಭವಿಸಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾರಣ. ಬೀಜಗಳು ಮತ್ತು ರಸಗೊಬ್ಬರಗಳ ಮೇಲೆ ಕೇಂದ್ರೀಕರಿಸುವ ಬದಲು, ಸಿಎಂ ವಿಶ್ವ ಸುಂದರಿ ಸ್ಪರ್ಧೆ ಕಡೆ ಗಮನ ಹರಿಸಿದ್ದೆ ಕಾರಣ ಎಂದು ಬಿಆರ್​ಎಸ್ ನಾಯಕ ಟಿ ಹರೀಶ್ ರಾವ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು,  ವಿಶ್ವ ಸುಂದರಿ ಸ್ಪರ್ಧೆ ಹೆಸರಿನಲ್ಲಿ ಎರಡು ತಿಂಗಳು ಆಡಳಿತವನ್ನು ದಾರಿ ತಪ್ಪಿಸಿದ್ದಾರೆ. ರೈತರಿಗೆ ಯೂರಿಯಾ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸಿಎಂ ರೇವಂತ್ ರೆಡ್ಡಿ ರೈತರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಾಲದಲ್ಲಿ ಒಂದು ತೊಲಾ ಚಿನ್ನ ನೀಡುವುದಾಗಿ ಭರವಸೆ ನೀಡಿದ್ದ ಸಿಎಂ ರೇವಂತ್ ರೆಡ್ಡಿ, ಬದಲಾಗಿ ಯೂರಿಯಾವನ್ನು ಚಿನ್ನವನ್ನಾಗಿ ಪರಿವರ್ತಿಸಿದ್ದಾರೆ. ಅವರ ನೇತೃತ್ವದಲ್ಲಿ ಹಳ್ಳಿಗಳಲ್ಲಿ ಮದ್ಯ ಮುಕ್ತವಾಗಿ ಹರಿಯುತ್ತದ. ಆದರೆ ಯೂರಿಯಾ ಚೀಲಗಳು ಲಭ್ಯವಾಗುವಂತೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಳೆದ 10 ವರ್ಷದ ಬಿಆರ್​ಎಸ್ ಸರ್ಕಾರದಲ್ಲಿ ಎಂದು ಯೂರಿಯಾ ಕೊರತೆ ಎದುರಿಸಲಿಲ್ಲ ಎಂದು ತಿಳಿಸಿದ್ದಾರೆ.

ಯೂರಿಯಾ ಕೊರತೆಯಿಂದ ಇಡೀ ರೈತ ಸಮುದಾಯ ಸಂಕಷ್ಟದಲ್ಲಿದ್ದಾಗ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಚಿಕೆಯಿಲ್ಲದೆ ಇದು ವಿರೋಧ ಪಕ್ಷದ ಪ್ರಚಾರ ಎಂದು ಕರೆಯುತ್ತಿದೆ. ಸರ್ಕಾರದ ನಡವಳಿಕೆಯು ಕಳ್ಳ ಎಂದು ಕೂಗುವ ಕಳ್ಳನಂತೆ ಇದೆ. ಭಾರೀ ಮಳೆಯಲ್ಲಿ ರೈತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂಬುದು ಸುಳ್ಳೇ? ರೈತರು ಸಾಲಿನಲ್ಲಿ ಸ್ಥಾನ ಕಾಯ್ದಿರಿಸಲು ಆಧಾರ್ ಕಾರ್ಡ್‌ಗಳು, ಪಾಸ್‌ಬುಕ್‌ಗಳು ಮತ್ತು ಚಪ್ಪಲಿಗಳನ್ನು ಇಡಬೇಕಾಯಿತು ಎಂಬುದು ಸುಳ್ಳೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರು ಯೂರಿಯಾ ಚೀಲಗಳಿಗಾಗಿ ಅಧಿಕಾರಿಗಳಲ್ಲಿ ಬೇಡಿಕೊಂಡರು ಎಂಬುದು ಸುಳ್ಳೇ? ತನ್ನ ಸಂಸದರ ಪ್ರಯತ್ನದಿಂದಾಗಿ ಯೂರಿಯಾ ಬಿಕ್ಕಟ್ಟು ಪರಿಹಾರವಾಯಿತು ಎಂದು ಹೇಳಲು ಕಾಂಗ್ರೆಸ್​ಗೆ ನಾಚಿಕೆಯಾಗುವುದಿಲ್ಲವೇ?, ಇಂದು ರೈತರು ಬಳಲುತ್ತಿರುವುದು  ಅವರ ಅಸಮರ್ಥತೆಯಿಂದಾಗಿಯೇ ಅಲ್ಲವೇ? ಸಿಎಂ ದೂರದೃಷ್ಟಿಯ ಕೊರತೆಯಿಂದಾಗಿ ರೈತರು ಕಣ್ಣೀರು ಸುರಿಸಬೇಕಾಗಿದೆಯೇ?" ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net