Bihar Murder Case | ತೇಜಸ್ವಿ ಮಹಾಜಂಗಲ್​ ರಾಜ್​ ಹೇಳಿಕೆ; ಆರ್​ಜೆಡಿ ನಾಯಕರ ಮನೆಯೇ ಅಪರಾಧಿಗಳ ತಾಣವಾಗಿತ್ತು ಎಂದು ಬಿಜೆಪಿ ಟೀಕೆ

Chirag, Tejashwi
Published on

Patna: ಮೋಕಾಮಾದ ಜೆಡಿಯು ನಾಯಕ ಅನಂತ್ ಸಿಂಗ್ ತರಹದ ಅಪರಾಧಿಗಳಿಗೆ (Bihar Murder Case) ಆಡಳಿತಾರೂಢ ಎನ್‌ಡಿಎ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದ್ದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ನಡೆಯಲಿರುವ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಅಪರಾಧಿಗಳನ್ನು ಹತ್ತಿಕ್ಕುವುದಾಗಿ ಪ್ರಮಾಣ ಮಾಡಿದ್ದರು.

ಜನ್​ ಸುರಾಜ್​ ಪಕ್ಷದ ಕಾರ್ಯಕರ್ತನ ಹತ್ಯೆ ಆರೋಪಿ ಎನ್ನಲಾದ ಅನಂತ್ ಸಿಂಗ್ ಬಂಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ, ರಾಜ್ಯದಲ್ಲಿ ಮಹಾ ಜಂಗಲ್ ರಾಜ್ ಆಳ್ವಿಕೆ ನಡೆಯುತ್ತಿದೆ, ಬಿಹಾರದ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲುವು ಸಾಧಿಸಲಿದ್ದು, ನವೆಂಬರ್ 14 ರಂದು ನಮ್ಮ ಮೈತ್ರಿಕೂಟ ಸರ್ಕಾರ ರಚಿಸಲಿದೆ, ನವೆಂಬರ್ 18 ರಂದು ಅಧಿಕಾರ ವಹಿಸಿಕೊಂಡು, ಜನವರಿ 26 ರೊಳಗೆ ಎಲ್ಲಾ ಅಪರಾಧಿಗಳನ್ನು ಜೈಲಿಗಟ್ಟಲಾಗುವುದು ಎಂದು ಪ್ರತಿಜ್ಞೆ ಮಾಡಿದರು.

ಎನ್‌ಡಿಎ ಮೇಲೆ ವಾಗ್ದಾಳಿ ನಡೆಸಿದ್ದ ತೇಜಸ್ವಿ ಯಾದವ್​ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಎನ್‌ಡಿಎ ಸರ್ಕಾರ ಎಂದಿಗೂ ಅಪರಾಧಿಗಳನ್ನು ರಕ್ಷಿಸುವುದಿಲ್ಲ, ಒಂದು ವೇಳೆ ನಾವು ಅಪರಾಧಿಗಳನ್ನು ರಕ್ಷಿಸುವುದೇ ಆದರೆ ನಿನ್ನೆ ರಾತ್ರಿ ತೆಗೆದುಕೊಂಡ ಕ್ರಮ ಸಾಧ್ಯವಿರಲಿಲ್ಲ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುವಂತೆ, ನಾವು ಯಾರ ಮೇಲು ಸುಳ್ಳು ಆರೋಪ ಹೊರಿಸುವುದಿಲ್ಲ, ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಏನೇನು ನಡೆಯಬೇಕು ಅದನ್ನೆಲ್ಲಾ ನಾವು ನಡೆಸಲಿದ್ದೇವೆ ಎಂದು ಹೇಳಿದರು. ದುಲಾರ್ ಸಿಂಗ್ ಯಾದವ್ ಹತ್ಯೆಯನ್ನು ದುಃಖಕರ ಘಟನೆ ಎಂದ ಚಿರಾಗ್​, ಯಾವುದೇ ಅಪರಾಧವನ್ನು ಕ್ಷಮಿಸಲಾಗುವುದಿಲ್ಲ, ಈಗ ತನಿಖೆ ಆರಂಭವಾಗಿದ್ದು, ಅಪರಾಧಿ ಯಾರೇ ಆಗಿದ್ದರೂ ಅವರನ್ನು ಕ್ಷಮಿಸುವುದಿಲ್ಲ, ತೇಜಸ್ವಿ ನವೆಂಬರ್​ 18ರ ಪ್ರಮಾಣವಚನ ಸಮಾರಂಭದ ಬಗ್ಗೆ ಮಾತನಾಡಿದ ಪಾಸ್ವಾನ್, ಇಂತಹ ದುರಹಂಕಾರ ಒಳ್ಳೆಯದಲ್ಲ, ನಿಮ್ಮನ್ನು ಯಾರು ಮುಖ್ಯಮಂತ್ರಿ ಮಾಡುತ್ತಿದ್ದಾರೆ ?, ಮತ್ತೊಮ್ಮೆ ಎನ್‌ಡಿಎ ಸಾರ್ವಕಾಲಿಕ ಅತ್ಯುನ್ನತ ಸರ್ಕಾರವನ್ನು ರಚಿಸುತ್ತೇವೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.

ಇದೇ ವಿಷಯವಾಗಿ ಕೇಂದ್ರ ಸಚಿವ ನಿತ್ಯಾನಂದ ರೈ ಮಾತನಾಡಿದ್ದು, ತಾವು ಸೇರಿದಂತೆ ತಮ್ಮನ್ನು ಬೆಂಬಲಿಸುವ ಜನರೆಲ್ಲರೂ ಅಪರಾಧಿಗಳನ್ನು ರಕ್ಷಿಸುವವರೆ ಎಂದು ತೇಜಸ್ವಿ ಯಾದವ್‌ಗೆ ತಿಳಿದಿದೆ. 1990 ರಿಂದ 2005 ರವರೆಗಿನ ಜಂಗಲ್ ರಾಜ್ ಸಮಯದಲ್ಲಿ, ಅಪರಾಧಿಗಳಿಗೆ ರಕ್ಷಣೆ ಸಿಕ್ಕಿತು.ಅನೇಕರು ಆರ್‌ಜೆಡಿ ಮಂತ್ರಿಗಳ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಅಪರಾಧಿಗಳನ್ನು ರಕ್ಷಿಸುವುದು, ಸ್ವಜನಪಕ್ಷಪಾತ ಎಸಗುವುದು, ಬಡವರ ಭೂಮಿಯನ್ನು ಕಸಿದುಕೊಳ್ಳುವುದೇ ಆರ್​ಜೆಡಿಯ ಆದ್ಯತೆಯಾಗಿತ್ತು ಎಂದು ಹೇಳಿದರು.

ಕೊಲೆ ಸೇರಿದಂತೆ ಒಟ್ಟು 28 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಅನಂತ್ ಸಿಂಗ್, ಬಿಹಾರದ ಮೋಕಾಮಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿದ್ದಾರೆ. ಐದು ಬಾರಿ ಶಾಸಕರಾಗಿರುವ ಸಿಂಗ್​, 2005 ರಿಂದ 2022 ರವರೆಗೆ ಈ ಸ್ಥಾನವನ್ನು ಪ್ರತಿನಿಧಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net