

Patna: ಬಿಹಾರ (Bihar) ಮೋಕಾಮಾದಲ್ಲಿ ನಡೆದ ಜನ್ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ್ ಯಾದವ್ ಹತ್ಯೆಯಲ್ಲಿ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಕೈವಾಡವಿದೆ ಎಂಬ ಹಿನ್ನಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ತಿರುಗೇಟು ನೀಡುತ್ತಾ, ರಾಜ್ಯದಲ್ಲಿ ಮಹಾ ಜಂಗಲ್ ರಾಜ್ ಆಳ್ವಿಕೆ ನಡೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ, ಪ್ರಧಾನಿ ಮೋದಿ ಇಂದು ಪಾಟ್ನಾದಲ್ಲಿ ರೋಡ್ ಶೋ ನಡೆಸಲಿದ್ದು, ಬಿಹಾರದ ಅನೇಕ ಕಡೆಗಳಲ್ಲಿ ಅಪರಾಧಗಳು ನಡೆದಿವೆ. ಅದೆಲ್ಲಾ ಇವರ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸುತ್ತಾ, ಇತ್ತೀಚೆಗೆ ಅರಾ ಮತ್ತು ರೋಹ್ತಾಸ್‌ನಲ್ಲಿ ತಂದೆ ಮತ್ತು ಮಗನ ಹತ್ಯೆಯಾಗಿದೆ, ರಾಜ್ಯದಲ್ಲಿ ಗುಂಡಿನ ಚಕಮಕಿ ನಡೆಯದ ದಿನವಿಲ್ಲ ಎನ್ನುವಂತಾಗಿದೆ, ಇದು ಬರೀ ಜಂಗಲ್ ರಾಜ್ ಅಲ್ಲ, 'ಮಹಾ ಜಂಗಲ್ ರಾಜ್' ಎಂದು ಹೇಳಿದರು.
ಬಿಹಾರದ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲುವು ಸಾಧಿಸಲಿದ್ದು, ನವೆಂಬರ್ 14 ರಂದು ನಮ್ಮ ಮೈತ್ರಿಕೂಟ ಸರ್ಕಾರ ರಚಿಸಲಿದೆ, ನವೆಂಬರ್ 18 ರಂದು ಅಧಿಕಾರ ವಹಿಸಿಕೊಂಡು, ಜನವರಿ 26 ರೊಳಗೆ ಎಲ್ಲಾ ಅಪರಾಧಿಗಳನ್ನು ಜೈಲಿಗಟ್ಟಲಾಗುವುದು ಎಂದು ಪ್ರತಿಜ್ಞೆ ಮಾಡಿದರು.
ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಕಾರ್ಖಾನೆಗಳನ್ನು ನಿರ್ಮಿಸುತ್ತಾರೆ, ಇತ್ತ ಬಿಹಾರದಲ್ಲಿ ತಮ್ಮ ಪಕ್ಷದ ಗೆಲುವನ್ನು ಎದುರು ನೋಡುತಿದ್ದಾರೆ. ಈ ರೀತಿಯ ಇಬ್ಬಗೆ ನೀತಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷ ಕಳೆದರು ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಈಗ ಅವರೇ 10 ಮಿಲಿಯನ್ ಉದ್ಯೋಗಗಳನ್ನು ಸೃಷ್ಠಿಸುವ ಕುರಿತು ಮಾತನಾಡುತ್ತಿರುವುದು ಹಾಸ್ಯಾಸ್ಪದ, ಇದು ಕೇವಲ ಚುನಾವಣಾ ಗಿಮಿಕ್ ಎಂದು ಹೇಳಿದರು.
ಆರ್‌ಜೆಡಿ ಸರ್ಕಾರದ ಅಧಿಕಾರದಲ್ಲಿದ್ದಾಗ ಜಂಗಲ್ ರಾಜ್ ನಡೆಸಿತ್ತು, ಈ ಚುನಾವಣೆಯು ಬಿಹಾರದ ಭವಿಷ್ಯವನ್ನು ಯಾರಿಗೆ ವಹಿಸಬೇಕೆಂದು ನಿರ್ಧರಿಸಲು ಒಂದು ಸುವರ್ಣಾವಕಾಶ, ಒಂದು ಕಡೆ ಜಂಗಲ್ರಾಜ್ಯವನ್ನು ಆರಂಭಿಸಿದವರು ಇದ್ದಾರೆ. ಮತ್ತೊಂದೆಡೆ ಅಭಿವೃದ್ಧಿಯನ್ನು ತಂದ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಜೋಡಿ ಇದೆ, ಆಯ್ಕೆ ನಿಮ್ಮದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದರು.
ಪ್ರಧಾನಿ ಮೋದಿ ಇತ್ತೀಚೆಗೆ ಮುಜಫರ್‌ಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ , ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು, ಅವರನ್ನು ಭ್ರಷ್ಟಾಚಾರದ ಯುವರಾಜರು, ಸುಳ್ಳು ಭರವಸೆಗಳ ಅಂಗಡಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಹಾರದ ಚುನಾವಣಾ ಕಣದಲ್ಲಿ ತಮ್ಮನ್ನು ಯುವರಾಜರೆಂದು ಪರಿಗಣಿಸಿರುವ ಇಬ್ಬರು ಯುವಕರಿದ್ದಾರೆ, ಒಬ್ಬರು ಭಾರತದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ, ಇನ್ನೊಬ್ಬರು ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ . ಅವರಿಬ್ಬರೂ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)