

ಬೆಂಗಳೂರು: ಬೆಳಗ್ಗೆ ಎದ್ದ ತಕ್ಷಣ ಸೂರ್ಯನ ಕಿರಣಗಳಿಗಿಂತ ಮೊದಲು ಮೊಬೈಲ್ ಸ್ಕ್ರೀನ್ ನೋಡುವುದು, ರಾತ್ರಿ ಮಲಗುವ ಮುನ್ನ ಕಣ್ಣು ನೋಯುವವರೆಗೆ ರೀಲ್ಸ್ ಸ್ಕ್ರೋಲ್ ಮಾಡುವುದು- ಇದು ಇಂದಿನ ಬಹುತೇಕ ಜನರ ಜೀವನಶೈಲಿ. ಸ್ಮಾರ್ಟ್ಫೋನ್ಗಳು ನಮ್ಮ ಬದುಕನ್ನು ಸುಲಭಗೊಳಿಸಿರುವುದು ನಿಜವಾದರೂ, ಅವು ನಮಗೇ ಅರಿವಿಲ್ಲದಂತೆ ನಮ್ಮಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿವೆ. ನಿದ್ರಾಹೀನತೆಗೆ ಕಾರಣವಾಗುತ್ತಿವೆ. ಒಂಟಿತನಕ್ಕೆ ತಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಈಗ ವಿಶ್ವದಾದ್ಯಂತ ಡಿಜಿಟಲ್ ಡಿಟಾಕ್ಸ್, ಡಿಜಿಟಲ್ ಫಾಸ್ಟಿಂಗ್, ಟೆಕ್ ಕರ್ಫ್ಯ ಸ್ಕ್ರೀನ್-ಫ್ರೀ ಟೈಮ್ ಮುಂತಾದ ವಿಧಾನಗಳು ಶುರುವಾಗಿವೆ. ಗ್ಯಾಜೆಟ್ಗಳಿಂದ ದೂರವಿರಲು ಈಗ ಬಹಳಷ್ಟು ಜನರು ಈ ವಿಧಾನಗಳಿಗೆ ಮೊರೆ ಹೋಗುತ್ತಿದ್ದಾರೆ.
ಒಂದು ಕೈಯಿಂದ ಊಟ ಮಾಡುತ್ತ, ಇನ್ನೊಂದು ಕೈಯಿಂದ ಮೊಬೈಲ್ ಫೋನ್ ಸ್ಕ್ರೋಲ್ ಮಾಡುತ್ತ ಕುಳಿತಿರುವ ಜನ ಈಗ ನಮಗೆ ಎಲ್ಲೆಡೆ ನೋಡಲು ಸಿಗುತ್ತಾರೆ. ಇಡೀ ಜಗತ್ತನ್ನು ಬೆರಳತುದಿಗೆ ತಂದು ನಿಲ್ಲಿಸಿರುವ ಮೊಬೈಲ್ ಫೋನ್ನಿಂದ ನಮ್ಮ ಅನೇಕ ಕೆಲಸಗಳು ಸುಲಭವಾಗಿವೆ ಎಂಬುದು ನಿಸ್ಸಂದೇಹ. ಆದರೆ ಅದರ ಅತಿಯಾದ ಬಳಕೆ ಈಗ ತನ್ನ ಕರಾಳಮುಖವನ್ನು ತೋರಿಸಲಾರಂಭಿಸಿದೆ. ಅದರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಊಟ-ತಿಂಡಿಯ ಅಭ್ಯಾಸಗಳು, ಜೀರ್ಣಕ್ರಿಯೆ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೂ ಕೆಟ್ಟ ಪರಿಣಾಮ ಆಗತೊಡಗಿದೆ. ಇದು ಈಗ ಜನರ ಅರಿವಿಗೂ ಬರಲಾರಂಭಿಸಿದೆ.
ಹಾಗಾಗಿ ತಾವೇ ಲಕ್ಷ್ಮಣರೇಖೆ ಹಾಕಿಕೊಳ್ಳತೊಡಗಿದ್ದಾರೆ. ಪೂರ್ತಿಯಾಗಿ ಅಲ್ಲದಿದ್ದರೂ ದಿನದ ಅಥವಾ ವಾರದ ನಿರ್ದಿಷ್ಟ ಅವಧಿಯಲ್ಲಾದರೂ ಮೊಬೈಲ್ ಫೋನ್ನಿಂದ ದೂರ ಇರುವುದನ್ನು ಅಭ್ಯಾಸ ಮಾಡಿಕೊಳ್ಳ ತೊಡಗಿದ್ದಾರೆ. ಈ ಪ್ರಕ್ರಿಯೆಗೆ ಹತ್ತುಹಲವು ಆಕರ್ಷಕ ಹೆಸರುಗಳನ್ನು ಇಟ್ಟಿ ದ್ದಾರಾದರೂ ಅವೆಲ್ಲವುಗಳ ಉದ್ದೇಶ ಒಂದೇ.
ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗಿ ನಾವು ಏನು ತಿನ್ನುತ್ತಿದ್ದೇವೆ, ಎಷ್ಟು ತಿನ್ನುತ್ತಿದ್ದೇವೆ, ಹೇಗೆ ತಿನ್ನುತ್ತಿದ್ದೇವೆ ಎಂಬುದರ ಮೇಲೆ ಗಮನವೇ ಇರುವುದಿಲ್ಲ. ಕಣ್ಣು-ಮನಸ್ಸೆಲ್ಲವೂ ಸ್ಕ್ರೀನ್ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇಂತಹ ಅಭ್ಯಾಸದಿಂದಾಗುವ ಪರಿಣಾಮಗಳನ್ನು ಒಂದು ಸಂಶೋಧನೆ ಬಯಲು ಮಾಡಿದೆ. ಫೋನ್ ನೋಡುತ್ತ ತಿಂಡಿ/ಊಟ ಸೇವಿಸುತ್ತಿದ್ದರೆ ಹೊಟ್ಟೆ ತುಂಬಿದ ಸಂಕೇತಗಳು ಮಿದುಳಿಗೆ ತಲುಪುವುದಿಲ್ಲ. ಹೀಗಾಗಿ ನಮಗೆ ಅರಿವಿಲ್ಲದೆಯೇ ನಾವು ಹೆಚ್ಚು ಆಹಾರ ಸೇವಿಸುತ್ತೇವೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವುದಿಲ್ಲ. ಒಟ್ಟಾರೆ ಆಹಾರ ಸೇವನೆಯ ಪ್ರಕ್ರಿಯೆಯೇ ಅಸ್ತವ್ಯಸ್ತವಾಗುತ್ತದೆ. ಮಲಗುವ ಮುನ್ನ ದೀರ್ಘಾವಧಿಯವರೆಗೆ ಸ್ಕ್ರೀನ್ ನೋಡುವುದರಿಂದ ದೇಹದಲ್ಲಿನ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ.
ಕಾರ್ಟಿಸೋಲ್ ಎಂದರೆ ಒತ್ತಡ ಸೃಷ್ಟಿಸುವ ಹಾರ್ಮೋನ್. ಇದು ಹೆಚ್ಚಾದಾಗ ನಿದ್ದೆಯ ಗುಣಮಟ್ಟ ಕೆಡುತ್ತದೆ. ಹಸಿವನ್ನು ನಿಯಂತ್ರಿಸುವ ಘ್ರಲಿನ್ ಮತ್ತು ಲೆಪ್ಟಿನ್ ಹಾರ್ಮೋನ್ಗಳಿಗೂ ಅಡ್ಡಿಯಾಗುತ್ತದೆ. ಜೀರ್ಣಕ್ರಿಯೆಗೆ ಅಗತ್ಯವಿರುವ ಕಿಣ್ವಗಳ ಉತ್ಪಾದನೆ ಕುಂಠಿತವಾಗುತ್ತದೆ. ಇದರಿಂದ ಎಚ್ಚೆತ್ತು ಹಲವರು ಡಿಜಿಟಲ್ ಡಿಟಾಕ್ಸ್ ಶುರು ಮಾಡಿದ್ದಾರೆ. ಅವರಲ್ಲಿ ನರಮಂಡಲ, ಜೀರ್ಣಾಂಗವ್ಯೂಹ ಪುನಶ್ಚೇತನ ಆಗಿದೆ. ಜೀರ್ಣಕ್ರಿಯೆ ಸುಧಾರಣೆಯಾಗಿದೆ. ಹೊಟ್ಟೆ ಉಬ್ಬರ ಇಳಿದಿದೆ. ನಿದ್ದೆಯ ಗುಣಮಟ್ಟ ವೃದ್ಧಿಸಿದೆ, ದೇಹದಲ್ಲಿನ ಎನರ್ಜಿಯ ಮಟ್ಟವೂ ಹೆಚ್ಚಾಗಿದೆ.
1. ನೋಟಿಫಿಕೇಶನ್ ಆಫ್: ಮೊಬೈಲ್ ಫೋನ್ ಪರದೆ ಮೇಲೆ ನೋಟಿಫಿಕೇಶನ್ಗಳು ಕ್ಷಣಕ್ಷಣಕ್ಕೂ ಪಾಪ್ಅಪ್ ಆಗುತ್ತಿದ್ದರೆ ನಿಮ್ಮ ಗಮನ ಅದರ ಮೇಲೆ ಹೋಗುವುದು, ತೆರೆದು ನೋಡುವಂತೆ ಪ್ರಚೋದಿಸುವುದು ಸಹಜ. ಹಾಗಾಗಿ ನಿರ್ದಿಷ್ಟ ಸಮಯದಲ್ಲಿ ನೋಟಿಫಿಕೇಶನ್ ಆಫ್ ಮಾಡಿಬಿಡಬೇಕು. ಆಗ ಅತ್ತ ಗಮನಹರಿಯುವುದು ತನ್ನಿಂತಾನೇ ಕಡಿಮೆಯಾಗುತ್ತದೆ.
2. ಟೆಕ್-ಫ್ರೀ ಟೈಮ್ ದಿನದ ಇಂತಿಷ್ಟು ಸಮಯ ಮೊಬೈಲ್ ಫೋನ್ ಅಥವಾ ಇತರ ಗ್ಯಾಜೆಟ್ಗಳನ್ನು ನೋಡುವುದಿಲ್ಲ ಎಂದು ನಿರ್ಧರಿಸಿ. ಈಗಾಗಲೇ ಬಹಳಷ್ಟು ಜನರು ಇದನ್ನು ಪಾಲಿಸುತ್ತಿದ್ದಾರೆ. ನಿರ್ದಿಷ್ಟ ಸಮಯದಲ್ಲಿ ಅವರ ಮೊಬೈಲ್ ಫೋನ್ ಆಫ್ಲೈನ್ ಇರುತ್ತದೆ, ನೀವು ಕಳಿಸಿದ ಯಾವುದೇ ಮೆಸೇಜ್ ಅವರಿಗೆ ಡೆಲಿವರಿ ಆಗುವುದಿಲ್ಲ. ಅದೇ ಟೆಕ್-ಫ್ರೀ ಟೈಮ್ ಅದು ಒಂದು ಗಂಟೆಯೂ ಆಗಿರಬಹುದು, ಒಂದೊಪ್ಪತ್ತೂ ಆಗಿರಬಹುದು.
3. ಟೆಕ್-ಫ್ರೀ ಜೋನ್: ಮನೆಯ ಬೆಡ್ರೂಮ್ ಬಾತ್ರೂಮ್ ಕಿಚನ್, ಡೈನಿಂಗ್ ಟೇಬಲ್ ಮುಂತಾದ ಕೆಲವು ಸ್ಥಳಗಳನ್ನು ಟೆಕ್-ಫ್ರೀ ಜೋನ್ ಎಂದು ಗುರುತಿಸಿ. ಅಲ್ಲಿಗೆ ಕುಟುಂಬ ಸದಸ್ಯರಾರೂ ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಮುಂತಾದ ಗ್ಯಾಜೆಟ್ಗಳನ್ನು ತೆಗೆದುಕೊಂಡು ಹೋಗಬಾರದೆಂದು ತೀರ್ಮಾನಿಸಿ.
4. ದೈಹಿಕ ಚಟುವಟಿಕೆ: ಬೆಳಗ್ಗೆ ಎದ್ದ ತಕ್ಷಣ, ಕನಿಷ್ಠ ಒಂದೆರಡು ಗಂಟೆಯಾದರೂ ಮೊಬೈಲ್ ಫೋನ್ ನೋಡುವುದನ್ನು ಸ್ವಯಂಪ್ರೇರಿತರಾಗಿ ನಿಲ್ಲಿಸಿ. ಆ ಸಮಯವನ್ನು ಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್ ಮುಂತಾದ ದೈಹಿಕ ಚಟುವಟಿಕೆಗೆ ಉಪಯೋಗಿಸಿ.
5. ಡೈರಿ ಬರೆಯಿರಿ: ಮಲಗುವ ಮುನ್ನ ಮೊಬೈಲ್ ಫೋನ್ನಲ್ಲಿ ರೀಲ್ಸ್ ಸ್ಕ್ರೋಲ್ ಮಾಡುವ ಬದಲು ಆಯಾ ದಿನ ಮಾಡಿದ ಕೆಲಸಗಳ ಬಗ್ಗೆ ಅಥವಾ ನಿಮಗಿಷ್ಟವಾದ ಯಾವುದೇ ವಿಷಯಗಳ ಬಗ್ಗೆ ಡೈರಿ ಬರೆಯುವುದನ್ನು ರೂಢಿ ಮಾಡಿಕೊಳ್ಳಿ.
6. ಹೊರಾಂಗಣ ಚಟುವಟಿಕೆ: ಸೈಕ್ಲಿಂಗ್, ತೋಟಗಾರಿಕೆ, ಪಕ್ಷಿ ವೀಕ್ಷಣೆ, ಪಿಕ್ನಿಕ್, ಚಿತ್ರಕಲೆ, ಮಾಡೆಲ್ ತಯಾರಿಸುವುದು, ಕರಕುಶಲ ಕೆಲಸ ಮುಂತಾದ ಚಟುವಟಿಕೆಗಳು ಗ್ಯಾಜೆಟ್ ಬಳಕೆ ಕಡಿಮೆ ಮಾಡಲು ಸಹಕಾರಿ. ಇವು ಮಾನಸಿಕ ಆಯಾಸವನ್ನು ಕಡಿಮೆ ಮಾಡುವುದಲ್ಲದೆ, ಏಕಾಗ್ರತೆ, ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತವೆ. ಮನಸ್ಥಿತಿಯನ್ನು ಉತ್ತಮಗೊಳಿಸುತ್ತವೆ.
7. ಟೆಕ್ ಕರ್ಫ್ಯೂ: ಮನೆಯಲ್ಲಿ ರಾತ್ರಿ 8 ಗಂಟೆಯ ನಂತರ ಅಥವಾ ಊಟದ ಸಮಯದಲ್ಲಿ ಯಾವುದೇ ಗ್ಯಾಜೆಟ್ಗಳನ್ನು ಬಳಸಬಾರದು ಎಂಬ ನಿಯಮ ಹಾಕಿಕೊಳ್ಳುವುದು. ಇದಕ್ಕೆ ಟೆಕ್ ಕರ್ಫ್ಯೂ ಎನ್ನುತ್ತಾರೆ. ಕುಟುಂಬದ ಸದಸ್ಯರ ನಡುವೆ ಸಂವಹನ ಹೆಚ್ಚಿಸಲು ಇದರಿಂದ ಸಹಾಯವಾಗುತ್ತದೆ.
8. ಡಿಜಿಟಲ್ ಫಾಸ್ಟಿಂಗ್: ವಾರಕ್ಕೊಮ್ಮೆ (ಉದಾಹರಣೆಗೆ ಭಾನುವಾರ) ಸಂಪೂರ್ಣವಾಗಿ ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನ್ನಿಂದ ದೂರವಿರುವುದು. ಈ ಸಮಯದಲ್ಲಿ ಪುಸ್ತಕ ಓದುವುದು, ತೋಟಗಾರಿಕೆ ಅಥವಾ ಪ್ರಕೃತಿಯೊಂದಿಗೆ ಸಮಯ ಕಳೆಯುವುದಕ್ಕೆ ಆದ್ಯತೆ ನೀಡುವುದು.
9. ಗ್ರೇ ಸ್ಕೇಲ್ ಮೋಡ್: ಸ್ಮಾರ್ಟ್ ಫೋನಿನ ಆಕರ್ಷಕ ಬಣ್ಣಗಳು ನಮ್ಮನ್ನು ಪದೇಪದೆ ಸ್ಕ್ರೀನ್ ನೋಡುವಂತೆ ಮಾಡುತ್ತವೆ. ಮೊಬೈಲ್ ಫೋನ್ನ್ನು ‘ಬ್ಲ್ಯಾಕ್ ಆಂಡ್ ವೈಟ್’ (ಗ್ರೇ ಸ್ಕೇಲ್) ಮೋಡ್ಗೆ ಹಾಕುವುದರಿಂದ ಸ್ಮಾರ್ಟ್ ಫೋನ್ ಬಳಸುವ ಆಸಕ್ತಿ ತಾನಾಗಿಯೇ ಕಡಿಮೆಯಾಗುತ್ತದೆ.
ಸ್ಮಾರ್ಟ್ಫೋನ್ಗಳು, ಕಂಪ್ಯೂಟರ್ಗಳು, ಟ್ಯಾಬ್ಲೆಟ್ಗಳು, ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸುವ ಅಥವಾ ಕಡಿಮೆ ಮಾಡುವ ಪ್ರಕ್ರಿಯೆಯೇ ಡಿಜಿಟಲ್ ಡಿಟಾಕ್ಸ್ (ವಿಷಮುಕ್ತಿ). ತಂತ್ರಜ್ಞಾನವನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ, ಬದಲಾಗಿ, ವರ್ಚುವಲ್ ವಿಶ್ವದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ನೈಜ ಪ್ರಪಂಚದೊಂದಿಗೆ ಮರುಸಂಪರ್ಕ ಸಾಧಿಸುವುದು. ನಿರಂತರವಾಗಿ ಮೊಬೈಲ್ ಫೋನ್ ಪರದೆ ನೋಡುವುದರಿಂದ ಮಾನಸಿಕ ಆಯಾಸ, ನಿದ್ರಾಹೀನತೆ, ಕಣ್ಣಿನ ಸಮಸ್ಯೆ ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಡಿಜಿಟಲ್ ಡಿಟಾಕ್ಸ್ನಿಂದ ಮಿದುಳಿಗೆ ವಿಶ್ರಾಂತಿ ಸಿಗುತ್ತದೆ. ಸೃಜನಶೀಲತೆ ಹೆಚ್ಚಿಸಲು, ಸಾಮಾಜಿಕ ಸಂಬಂಧಗಳನ್ನು ವೃದ್ಧಿಸಲು ಇದು ಸಹಕಾರಿ.
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನಾವು ಹೇಗೆ ಆಗಾಗ ನಿರ್ದಿಷ್ಟ ಆಹಾರ ಪದಾರ್ಥಗಳಿಂದ ದೂರ ಇರುತ್ತೇವೆಯೋ, ಹಾಗೆಯೇ ಮನಸ್ಸಿನ ಮೇಲಾಗಿರುವ ತಂತ್ರಜ್ಞಾನದ ಅತಿಯಾದ ಪ್ರಭಾವವನ್ನು ಕಡಿಮೆ ಮಾಡಲು ಗ್ಯಾಜೆಟ್ಗಳಿಂದ ದೂರವಿರುವುದೇ ಡಿಜಿಟಲ್ ಡಿಟಾಕ್ಸ್. ತಂತ್ರಜ್ಞಾನ ನಮ್ಮ ಶತ್ರುವಲ್ಲ. ಆದರೆ ಎಷ್ಟು ಬಳಸಬೇಕು, ಹೇಗೆ ಬಳಸಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಡಿಟಾಕ್ಸ್ ಎಂದರೆ ಫೋನನ್ನು ವಾರಗಟ್ಟಲೆ, ತಿಂಗಳುಗಟ್ಟಲೆ ದೂರ ಇಡುವುದು ಎಂದರ್ಥವಲ್ಲ. ಪ್ರತಿದಿನವೂ ನಿರ್ದಿಷ್ಟ ಸಮಯದಲ್ಲಿ ಮಾತ್ರ ಅದರಿಂದ ದೂರವಿರುವುದು ಎಂದರ್ಥ.
1. ಡೋಪಮೈನ್ ಲೂಪ್: ನಾವು ಸೋಶಿಯಲ್ ಮೀಡಿಯಾದಲ್ಲಿ ಲೈಕ್ ಅಥವಾ ನೋಟಿಫಿಕೇಶನ್ ನೋಡಿದಾಗ ಅಥವಾ ನಮಗಿಷ್ಟವಾದ ಚಿತ್ರಗಳು, ವಿಡಿಯೋಗಳನ್ನು ವೀಕ್ಷಿಸಿದಾಗ ನಮ್ಮ ಮಿದುಳಿನಲ್ಲಿ ಡೋಪಮೈನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ನಮಗೆ ತಾತ್ಕಾಲಿಕ ಸಂತೋಷ ನೀಡಿ, ಪದೇಪದೆ ಸ್ಮಾರ್ಟ್ ಫೋನ್ ನೋಡುವಂತೆ ಪ್ರಚೋದಿಸುತ್ತದೆ.
2. ಬ್ಲ್ಯೂ ಲೈಟ್ ಎಫೆಕ್ಟ್: ಮೆಲಟೋನಿನ್ ಎಂಬುದು ನಿದ್ರೆಗೆ ಸಹಕಾರಿಯಾದ ಹಾರ್ಮೋನ್. ಮೊಬೈಲ್ ಫೋನ್ ಸ್ಕ್ರೀನ್ನಿಂದ ಬರುವ ನೀಲಿ ಬೆಳಕು ಅದರ ಉತ್ಪತ್ತಿಯನ್ನು ತಡೆಯುತ್ತದೆ.
3. ಡಿಜಿಟಲ್ ವಿತ್ಡ್ರಾಯಲ್: ಅತಿಯಾಗಿ ಫೋನ್ ಬಳಸುವವರಿಂದ ಫೋನ್ ಕಿತ್ತುಕೊಂಡರೆ, ಡ್ರಗ್ಸ್ ವ್ಯಸನಿಗಳಲ್ಲಿ ಕಂಡುಬರುವಂತಹ ಆತಂಕ ಅವರಲ್ಲಿ ಕಂಡುಬರುತ್ತದೆ.
1. ಫೋಮೋ: ಫಿಯರ್ ಆಫ್ ಮಿಸ್ಸಿಂಗ್ ಔಟ್ನ ಹೃಸ್ವರೂಪವೇ ಫೋಮೋ. ಅಂದರೆ ಆಗಾಗ ಫೋನ್ ನೋಡದಿದ್ದರೆ, ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಯ. ಇದರಿಂದ ತೀವ್ರ ಮಾನಸಿಕ ಒತ್ತಡ, ಆತಂಕ ಸೃಷ್ಟಿಯಾಗುತ್ತದೆ.
2. ಫ್ಯಾಂಟಮ್ ವೈಬ್ರೇಷನ್: ಫೋನ್ ರಿಂಗ್ ಆಗದಿದ್ದರೂ ಆದಂತೆ ಭಾಸವಾಗುವುದು. ಬೇರೆ ವಿಷಯಗಳ ಮೇಲೆ ಏಕಾಗ್ರತೆಯ ಕೊರತೆ, ನರವ್ಯೂಹದ ಮೇಲೆ ಒತ್ತಡ.
3. ನೋಮೊಫೋಬಿಯಾ: ಫೋನ್ ಇಲ್ಲದೆ ಇರಲಾರದ ಸ್ಥಿತಿ. ನಿದ್ರಾಹೀನತೆ (ಇನ್ಸೋಮ್ನಿಯಾ) ಮತ್ತು ಕಣ್ಣಿನ ಸಮಸ್ಯೆಗಳು.
4. ಸೋಷಿಯಲ್ ಕಂಪೇರಿಷನ್: ಇತರರ ಜೀವನವನ್ನು ನೋಡಿ ಕೀಳರಿಮೆ ಬೆಳೆಸಿಕೊಳ್ಳುವುದು, ಅತೃಪ್ತಿಪಡುವುದು. ಆತ್ಮವಿಶ್ವಾಸದ ಕುಸಿತ ಮತ್ತು ಖಿನ್ನತೆ.
ನೀವು ಇಂದೇ ಡಿಜಿಟಲ್ ಡಿಟಾಕ್ಸ್ ಆರಂಭಿಸಲು ಬಯಸಿದರೆ ಮೊದಲು ಈ ಹಂತಗಳನ್ನು ಅನುಸರಿಸಿ.
1. ಸ್ಕ್ರೀನ್ ಟೈಮ್ ಟ್ರ್ಯಾಕಿಂಗ್: ನಿಮ್ಮ ಫೋನ್ನಲ್ಲಿರುವ ‘ಡಿಜಿಟಲ್ ವೆಲ್ಬೀಯಿಂಗ್’ ಎಂಬ ಫೀಚರ್ ಬಳಸಿ ನೀವು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ದಿನಕ್ಕೆ ಒಟ್ಟಾರೆ 2-3 ಗಂಟೆಗಿಂತ ಹೆಚ್ಚು ಸಮಯವನ್ನು ಫೋನ್ನಲ್ಲಿ ಕಳೆಯುತ್ತಿದ್ದರೆ ಎಚ್ಚೆತ್ತುಕೊಳ್ಳಿ.
2. ಗಡಿಯಾರ ಬಳಸಿ: ಬೆಳಗಿನ ಅಲಾಮ್ರ್ ಗೋಸ್ಕರ ಸ್ಮಾರ್ಟ್ ಫೋನ್ ಬಳಸಬೇಡಿ. ಇದರಿಂದ ಬೆಳಗ್ಗೆ ಎದ್ದ ತಕ್ಷಣ ಫೋನ್ ಕೈಗೆತ್ತಿಕೊಳ್ಳುವುದು ತಪ್ಪುತ್ತದೆ.
3. ಆ್ಯಪ್ ಡಿಲೀಟ್: ನಿಮ್ಮ ಸಮಯ ವ್ಯರ್ಥ ಮಾಡುವ ಆಪ್ಗಳನ್ನು ನಿರ್ದಾಕ್ಷಿಣ್ಯವಾಗಿ ಅನ್ಇನ್ಸ್ಟಾಲ್ ಮಾಡಿ.
4. ಸಮಯ ನಿಗದಿಪಡಿಸಿ: ಇಮೇಲ್, ವಾಟ್ಸ್ಆಪ್ ಮೆಸೇಜ್ಗಳನ್ನು ನೋಡಲು ದಿನದಲ್ಲಿ ನಿರ್ದಿಷ್ಟ ಸಮಯವನ್ನು ಮಾತ್ರ ಮೀಸಲಿಡಿ. ಉದಾಹರಣೆಗೆ ಗಂಟೆಗೆ ಅಥವಾ ಎರಡು ಗಂಟೆಗಳಿಗೆ ಒಮ್ಮೆ ಮಾತ್ರ.