

ನವದೆಹಲಿ: ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ಮುಂದಿನ ಶನಿವಾರ ಅಹಮದಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧದ ಹೈ&ವೋಲ್ಟೇಜ್ ಪಂದ್ಯದಲ್ಲಿ ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂಬ ವರದಿಯನ್ನು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ತಳ್ಳಿಹಾಕಿದ್ದಾರೆ.
ಭಾರತ ತಂಡದ ಆಟಗಾರರು ಪ್ರಸಕ್ತ ಅಭ್ಯಾಸದ ವೇಳೆ ತಿಳಿ ಕೇಸರಿ ಬಣ್ಣದ ಜೆರ್ಸಿ ಧರಿಸುತ್ತಿದ್ದರೂ, ಪಂದ್ಯದಲ್ಲಿ ಎಂದಿನ ನೀಲಿ ಬಣ್ಣದ ಜೆರ್ಸಿಯಲ್ಲೇ ಆಡುತ್ತಿದ್ದಾರೆ. ಈ ಮುನ್ನ 2019ರ ವಿಶ್ವಕಪ್ನಲ್ಲಿ ಭಾರತ, ಆತಿಥೇಯ ಇಂಗ್ಲೆಂಡ್ ವಿರುದ್ಧ ಕೇಸರಿ ಮತ್ತು ಕಡು ನೀಲಿ ಬಣ್ಣದ ಜೆರ್ಸಿಯಲ್ಲಿ ಆಡಿತ್ತು.
ಇಂಗ್ಲೆಂಡ್ ಕೂಡ ತಿಳಿನೀಲಿ ಬಣ್ಣದ ಜೆರ್ಸಿ ಹೊಂದಿದ್ದ ಕಾರಣ ಐಸಿಸಿ ಕೋರಿಕೆಯ ಮೇರೆಗೆ ಆಗ ಟೀಮ್ ಇಂಡಿಯಾ ಜೆರ್ಸಿ ಬಣ್ಣ ಬದಲಾಯಿಸಿತ್ತು. ಆದರೆ ಈ ಬಾರಿ ಭಾರತವೇ ಆತಿಥೇಯ ತಂಡವಾಗಿರುವುದರಿಂದ ಜೆರ್ಸಿ ಬಣ್ಣ ಬದಲಾಯಿಸುವ ಪ್ರಶ್ನೆ ಬರುವುದಿಲ್ಲ.