ಗಿಲ್​-ಜೈಸ್ವಾಲ್​ ಆರ್ಭಟಕ್ಕೆ ಜಿಂಬಾಬ್ವೆ ಠುಸ್​; ಟಿ20 ಸರಣಿ ವಶಪಡಿಸಿಕೊಂಡ ಯುವ ಭಾರತ

GIll Jaiswal
Published on

ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಟೀಮ್​ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಶುಭಮನ್​ ಗಿಲ್​ ನೇತೃತ್ವದ ಯುವ ಭಾರತ ಭರ್ಜರಿ ಜಯ ಸಾಧಿಸಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್​ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ ಭಾರತ ತಂಡವು ನಾಯಕ ಸಿಕಂದರ್​ ರಾಜಾ (46 ರನ್, 28 ಎಸೆತ, 2 ಬೌಂಡರಿ, 3 ಸಿಕ್ಸರ್) ಕೆಲಕಾಲ ಬಿರುಸಿನ ಆಟದ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿತ್ತು. ಭಾರತದ ಪರ ಖಲೀಲ್​ ಅಹ್ಮದ್​ (4-0-32-2), ತುಷಾರ್​ ದೇಶ್​ಪಾಂಡೆ (3-0-30-1), ರವಿ ಬಿಷ್ಣೋಯಿ (4-0-22-0), ವಾಷಿಂಗ್ಟನ್​ ಸುಂದರ್ (4-0-32-1), ಅಭಿಷೇಕ್​ ಶರ್ಮಾ (3-0-20-1), ಶಿವಂ ದುಬೆ (2-0-11-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

153 ರನ್​ಗಳ ಗುರಿ ಬೆನತ್ತಿದ್ದ ಭಾರತ ತಂಡವು ಆರಂಭಿಕರಾದ ಯಶಸ್ವಿ ಜೈಸ್ವಾಲ್​ (93 ರನ್, 53 ಎಸೆತ, 13 ಬೌಂಡರಿ, 2 ಸಿಕ್ಸರ್), ನಾಯಕ ಶುಭಮನ್​ ಗಿಲ್​ (58 ರನ್, 39 ಎಸೆತ, 6 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಗುರಿಯನ್ನು ವಿಕೆಟ್​ ನಷ್ಟವಿಲ್ಲದೆ 15.2 ಓವರ್​ಗಳಲ್ಲಿ ಬೆನ್ನಟ್ಟುವ ಮೂಲಕ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net