ಗುರುಗ್ರಾಮ: ತನ್ನ ಸ್ನೇಹಿತೆಯೊಂದಿಗೆ ಚಾಟ್ ಮಾಡಿದ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕನೋರ್ವ 16 ವರ್ಷದ ಬಾಲಕನನ್ನು ಇರಿದು ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ಸೆಕ್ಟರ್ 40ರಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸೆಕ್ಟರ್ 40 ಪ್ರದೇಶದಲ್ಲಿ ಬಾಲಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಎಂದು ಬುಧವಾರ (ಜುಲೈ 10) ರಾತ್ರಿ ನಮಗೆ ಕರೆ ಬಂತು. ಕೂಡಲೇ ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆವು. ಆದರೆ, ಗಾಯಾಳು ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಇದನ್ನೂ ಓದಿ: ಇದು ಲೇಡೀಸ್ ಸೀಟು ನೀವು ಕೂರಬೇಡಿ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಯುವಕರು; ವಿಡಿಯೋ ವೈರಲ್
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದಾಗ ಮೃತನ ಕುತ್ತಿಗೆ, ತಲೆ ಹಾಗೂ ಎದೆ ಭಾಗದಲ್ಲಿ ಚಾಕುವಿನಿಂದ ಇರಿದಿರುವುದು ತನಿಖೆಯಲ್ಲಿ ಬೆಳಕಿಗೆ ಬಂತು. ಘಟನೆ ನಡೆದ ಪ್ರದೇಶದ ಸುತ್ತಮುತ್ತ ಇರುವ ಸಿಸಿಟಿವಿ ಪರಿಶೀಲಿಸಿದಾಗ ಬಾಲಕನೋರ್ವ ಈತನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ಬೆಳಕಿಗೆ ಬಂತು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಹಾಗೂ ಸಂತ್ರಸ್ತ ಒಂದೇ ಗ್ರಾಮದವರಾಗಿದ್ದು, ಇಬ್ಬರು ಕೂಡ ಸ್ನೇಹಿತರಾಗಿದ್ದರು. ಸಂತ್ರಸ್ತ ಆರೋಪಿಯ ಸ್ನೇಹಿತೆಗೆ ಇನ್ಸ್ಟಾಗ್ರಾಮ್ನಲ್ಲಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಆತ ಸಿಟ್ಟಿಗೆದ್ದು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಅದರಂತೆ ಬುಧವಾರ ಸಂಜೆ ಪಾರ್ಟಿ ಮಾಡುವ ನೆಪದಲ್ಲಿ ಆತನನ್ನು ಕರೆಸಿಕೊಂಡು ಚಾಕುವಿನಿಂದ ಎದೆ, ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಗಾಯಾಳು ಸುಮಾರು 250 ಮೀಟರ್ ದೂರ ಓಡಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಕರೆ ಮಾಡಿ ನಮಗೆ ಮಾಹಿತಿ ನೀಡಿ ಸಹಕರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.