

ಭೋಪಾಲ್: ಮಹಿಳೆಯರಿಗೆ ಮೀಸಲಿರುವ ಆಸನದಲ್ಲಿ ಕೂರಬೇಡಿ ಎಂದಿದ್ದಕ್ಕೆ ಯುವಕರಿಬ್ಬರು ಚಾಲಕ ಹಾಗೂ ನಿರ್ವಾಹಕನಿಗೆ ಮನಬಂದಂತೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ನೀಲ್ಬಾದ್ನಿಂದ ಸೂರಜ್ನಗರಕ್ಕೆ ಬಸ್ ಸಂಚರಿಸಲಿದ್ದು, ಹಲ್ಲೆ ಮಾಡಿದವರ ಪೈಕಿ ಓರ್ವ ಮಹಿಳೆಯರ ಸೀಟಿನಲ್ಲಿ ಕುಳಿತುಕೊಂಡಿದ್ದ. ಇದನ್ನು ಗಮನಿಸಿದ ಚಾಲಕ ಕೃಷ್ಣಪಾಲ್ ಸಿಂಗ್ ಆತನಿಗೆ ಮಹಿಳೆಯರಿಗೆ ಮೀಸಲಿರುವ ಆಸನ ಬಿಟ್ಟು ಹಿಂಬಿದ ಹೋಗಿ ಕೂರುವಂತೆ ಸೂಚಿಸಿದ್ದಾರೆ.
ಇದಾದ ಬಸ್ನಿಂದ ಇಳಿದ ಆರೋಪಿಯು ಬಳಿಕ ತನ್ನ ಸ್ನೇಹಿತನೊಂದಿಗೆ ಪಾನಮತ್ತನಾಗಿ ಬಂದು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ಚಿಂಟು ಮತ್ತು ಅಂಕುಶ್ ಎಂದು ಗುರುತಿಸಲಾಗಿದ್ದು, ಇವರು ನಹೆರು ಕಾಲೋನಿಯ ಹೊಸ ಮಾರ್ಕೆಟ್ ನಿವಾಸಿಗಳೆಂದು ತಿಳಿದು ಬಂದಿದೆ. ಹಲ್ಲೆಯಿಂದ ಚಾಲಕನ ಮೂಗಿಗೆ ಗಾಯವಾಗಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡುವುದಕ್ಕೂ ಮುನ್ನ ಆರೋಪಿಗಳಿಬ್ಬರು ತಮ್ಮ ಮನೆಯ ಬಳಿ ಇದ್ದ ವಾಹನಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಹಾನಿ ಮಾಡಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ದೂರು ದಾಖಲಿಸಲಾಗಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.