ರಕ್ಷಿತ್​ ಶೆಟ್ಟಿ ಜನ್ಮದಿನಕ್ಕೆ ‘777 ಚಾರ್ಲಿ’ ಟೀಮ್​ನಿಂದ ಈ ಉಡುಗೊರೆ!

b0a4fe91605007.Y3JvcCwzNTAwLDI3MzcsMCww
Published on

ಕಳೆದ ವರ್ಷ ರಕ್ಷಿತ್​ ಶೆಟ್ಟಿ ಜನ್ಮದಿನಕ್ಕೆ ’ಅವನೇ ಶ್ರೀಮನ್ನಾರಾಯಣ‘ ಸಿನಿಮಾ ತಂಡದಿಂದ ಟೀಸರ್​ ಉಡುಗೊರೆ ರೂಪದಲ್ಲಿ ಸಿಕ್ಕಿತ್ತು. ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ‘777 ಚಾರ್ಲಿ’ ಚಿತ್ರತಂಡದಿಂದ ರಕ್ಷಿತ್​ಗೆ ಹೊಸ ಗಿಫ್ಟ್ ಸಿಗಲಿದೆ. ಹೌದು, ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ, ಸರಳವಾಗಿ ಜನ್ಮ ದಿನ ಆಚರಿಸಿಕೊಳ್ಳಲಿರುವ ರಕ್ಷಿತ್​ ಶೆಟ್ಟಿಗೆ, ಚಾರ್ಲಿ ಟೀಮ್​, ಲೈಫ್ ಆಫ್​ ಧರ್ಮ ಎಂಬ ವಿಶೇಷ ವಿಡಿಯೋ ತುಣುಕನ್ನು ಅವರ ಜನ್ಮ ದಿನದ ಪ್ರಯುಕ್ತ ಜೂ. 6ರಂದು ಬಿಡುಗಡೆ ಮಾಡಲಿದೆ. ಈಗಾಗಲೇ ಈ ವಿಚಾರವನ್ನು ಸ್ವತಃ ರಕ್ಷಿತ್​ ಶೆಟ್ಟಿ ಸಹ ಶೇರ್​ ಮಾಡಿಕೊಂಡಿದ್ದು, ಆ ವಿಡಿಯೋದಲ್ಲೇನಿದೆ ಎಂಬುದು ಸ್ವತಃ ಅವರಿಗೂ ಗೊತ್ತಿಲ್ಲವಂತೆ.

ಕಿರಣ್​ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್​ ಧರ್ಮ ಹೆಸರಿನ ಪಾತ್ರ ನಿಭಾಯಿಸಿದ್ದಾರೆ. ಆ ಪಾತ್ರದ ಬಗ್ಗೆ ವಿಡಿಯೋವೊಂದನ್ನು ಸಿದ್ಧಪಡಿಸಲಾಗಿದ್ದು, ಅದನ್ನೇ ಬಿಡುಗಡೆ ಮಾಡಿ ಚಿತ್ರದ ನಾಯಕನಿಗೆ ಜನ್ಮದಿನದ ಶುಭಾಶಯ ಕೋರಲಿದ್ದಾರಂತೆ ನಿರ್ದೇಶಕ ಕಿರಣ್​ ರಾಜ್​.

ಈಗಾಗಲೇ ಚಿತ್ರದ ಬಹುಪಾಲು ಶೂಟಿಂಗ್​ ಮುಕ್ತಾಯವಾಗಿದ್ದು, ಪ್ಯಾಚ್​ ವರ್ಕ್​ ಕೆಲಸಗಳಷ್ಟೇ ಬಾಕಿ ಉಳಿದಿದೆ. ಶೂಟಿಂಗ್​ಗೆ ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆ ಮೈಸೂರು ಸೇರಿ ಉತ್ತರ ಭಾರತದ ಕೆಲವೆಡೆ ಚಿತ್ರೀಕರಣ ಮಾಡಿಕೊಳ್ಳುವ ಪ್ಲ್ಯಾನ್​ ರೂಪಿಸಲಾಗಿದೆ. ಪರಮ್​ವಾ ಮತ್ತು ಪುಷ್ಕರ್​ ಫಿಲಂಸ್​ ಬ್ಯಾನರ್​ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಅಕ್ಟೋಬರ್​, ನವೆಂಬರ್​ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net