

ಬೆಂಗಳೂರು: ಮಧ್ಯಂತರ ರಜೆ ಮುಗಿಸಿದ ಶಿಕ್ಷಕರು ಸೋಮವಾರದಿಂದ ಮರಳಿ ಶಾಲೆಗೆ ಹೋಗಬೇಕಿದೆ. ಈಗಾಗಲೇ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು, ವಿದ್ಯಾಥಿರ್ಗಳ ಹೊರತಾಗಿ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಹೋಗಬೇಕಿದೆ.
ಶಾಲೆಗೆ ಹೋದ ಮೇಲೆ ವಿದ್ಯಾಗಮ ಯೋಜನೆ ಕುರಿತು ಫಲಿತಾಂಶವನ್ನು ವಿಶ್ಲೇಷಣೆ ಮಾಡಬೇಕಿದೆ. ಈ ಹಿಂದೆ ವಿದ್ಯಾಗಮ ಸ್ಥಗಿತವಾಗಿತ್ತು. ತಕ್ಷಣ ಮಧ್ಯಂತರ ರಜೆ ನೀಡುವಂತೆ ಶಿಕ್ಷಕರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಿಕ್ಷಕರಿಗೆ ಅಕ್ಟೋಬರ್ ಅಂತ್ಯದವರೆಗೆ ರಜೆ ನೀಡಿತ್ತು. ಇದೀಗ ರಜೆ ಮುಕ್ತಾಯವಾಗಿರುವುದರಿಂದ ಶಿಕ್ಷಕರು ಮರಳಿ ಶಾಲೆಗೆ ಹೋಗಬೇಕಿರುವುದು ಅನಿವಾರ್ಯವಾಗಿದೆ.
ಕೆಲಸ ಏನು?: ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಪಗ್ರತಿಯನ್ನು ವಿಶ್ಲೇಷಣೆ ಮಾಡಿ ವಿದ್ಯಾರ್ಥಿವಾರು ಸಾಧನೆ ಮತ್ತು ಕೊರತೆ ಪಟ್ಟಿ ಮಾಡಲು ಹಾಗೂ ಸದರಿ ವಿಶ್ಲೇಷಣೆ ಮಾಡಿ ವಿದ್ಯಾರ್ಥಿವಾರು ಸಾಧನೆ ಮತ್ತು ಕೊರತೆ ಪಟ್ಟಿ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ವಿಶ್ಲೇಷಣೆ ಅನುಸಾರ ಮುಂದಿನ ಕಲಿಕೆಗೆ ಅವಶ್ಯ ಬೋಧನಾ ಕಲಿಕಾ ಯೋಜನೆ, ಬೋಧನಾ-ಕಲಿಕಾ ಸಾಮಗ್ರಿ ತಯಾರಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದೆ. ಅಲ್ಲದೆ, ಯುಟ್ಯೂಬ್ ಚಾನೆಲ್ ಆದ ಜ್ಞಾನದೀಪದಲ್ಲಿ ಅಳವಡಿಸಿರುವ ವಿಡಿಯೋಗಳನ್ನೇ ನೋಡಲು ತಿಳಿಸಿರುವುದರಿಂದ ಚಂದನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಿದೆ.
ಇಂದು ಸಭೆ: 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನ.2ರಂದು ಇಲಾಖೆಯ ಕಲಬುರಗಿ, ಬೆಳಗಾವಿ ವಿಭಾಗದ ಅಪರ ಆಯುಕ್ತರು, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಆಯೋಜಿಸಿದ್ದಾರೆ. ಇದರಲ್ಲಿ ಶಾಲೆ ಆರಂಭಿಸುವ ವಿಚಾರದ ಜತೆಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಶಾಲೆಗಳಿಗೆ ನೀರಿನ ಲಭ್ಯತೆ ಹಾಗೂ ಅಲಭ್ಯತೆ ಬಗ್ಗೆ ನಿಖರ ಮಾಹಿತಿ ಪಡೆಯಲಾಗುತ್ತದೆ.