

ಬೆಂಗಳೂರು: ರಸ್ತೆಯಲ್ಲಿನ ಗುಂಡಿಯಿಂದಾಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ವಾಹನ ಸಾಗಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಶರ್ಮಿಳಾ ಸಾವಿಗೀಡಾಗಿದ್ದು, ಅವರ ಪತಿ ಪ್ರಕಾಶ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶರ್ಮಿಳಾ-ಪ್ರಕಾಶ್ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಂಜನನಗರ ಬಳಿ ಈ ಅವಘಡ ಉಂಟಾಗಿದೆ. ರಸ್ತೆಯಲ್ಲಿ ಪೈಪ್ಲೈನ್ ಕಾಮಗಾರಿಗೆಂದು ಅಗೆದು ಗುಂಡಿ ಉಂಟಾಗಿದ್ದು, ಅದನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ದ್ವಿಚಕ್ರವಾಹನ ಆಯತಪ್ಪಿದ್ದು, ಆಕೆ ಕೆಳಕ್ಕೆ ಬಿದ್ದಿದ್ದಾರೆ. ಅವರ ಮೇಲೆ ಬೊಲೆರೊ ವಾಹನ ಸಾಗಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಈಕೆ ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿಯೊಂದಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗುಂಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.