ಚುನಾವಣೆಗೆ ಅಣ್ಣಾಮಲೈ ಸ್ಪರ್ಧಿಸಲ್ವಾ? ಅನುಮಾನ ಮೂಡಿಸಿದೆ ಈ ಹೇಳಿಕೆ

ANNAMALAI
Published on

ಮೈಸೂರು: ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ? ಹೌದು, ಇಂತಹದ್ದೊಂದು ಪ್ರಶ್ನೆಯನ್ನು ಸ್ವತಃ ಅಣ್ಣಮಲೈ ಅವರ ಹೇಳಿಕೆಯೇ ಹುಟ್ಟುಹಾಕಿದೆ.

ಮೈಸೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ವಕೀಲ ಓ.ಶಾಮಭಟ್ ಅವರ "ಬೆಂಕಿಯ ಚೆಂಡು ಕುಯಿಲಿ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ 'ದಿಗ್ವಿಜಯ ನ್ಯೂಸ್'​ ಜತೆ ಮಾತನಾಡಿದ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ, ಕ್ಯಾಂಡೆಟ್ ಎನ್ನುವ ಪ್ರಶ್ನೆಯೇ ಇಲ್ಲ. ಅಭ್ಯರ್ಥಿ ಆಗೋದಕ್ಕಿಂತ ಕಾರ್ಯಕರ್ತ ಆಗಿರುವುದೇ ಒಳ್ಳೆಯದ್ದು. ನಾನು ಅಭ್ಯರ್ಥಿ ಆಗುತ್ತೇನೆ ಅಂತ ಹೇಳಿಕೊಳ್ಳುವ ವ್ಯವಸ್ಥೆ ಬಿಜೆಪಿಯಲ್ಲಿ ಇಲ್ಲ ಎಂದರು. ಇದನ್ನೂ ಓದಿರಿ ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

ಅಭ್ಯರ್ಥಿಯಾದರೆ ಸೀಮಿತ ಕ್ಷೇತ್ರದಲ್ಲಿ ಓಡಾಡಿಕೊಂಡು ಇರಬೇಕಾಗುತ್ತೆ. ಆದರೆ ಕಾರ್ಯಕರ್ತನಿಗೆ ಎಲ್ಲಿ ಬೇಕಾದರೂ ಪ್ರವಾಸ ಮಾಡುವ ಸ್ವಾತಂತ್ರ್ಯ ಇರುತ್ತೆ. ನಾನು ಅಭ್ಯರ್ಥಿ ಆಗುತ್ತೇನೆ ಅಂತ ಹೇಳಿಕೊಳ್ಳುವ ವ್ಯವಸ್ಥೆ ಬಿಜೆಪಿಯಲ್ಲಿ ಇಲ್ಲ. ಅಭ್ಯರ್ಥಿ ಆಗಬೇಕೋ, ಬೇಡವೋ ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತೆ ಎಂದ ಅಣ್ಣಾಮಲೈ, ತಮಿಳುನಾಡಿನಲ್ಲಿ ಅಕೌಂಟ್ ಓಪನ್ ಮಾಡಬೇಕು ಎಂಬುದು ನನ್ನ ಗುರಿ ಎಂದರು.

ಪಕ್ಷ ನನ್ನನ್ನು ಬೆಳೆಸುತ್ತದೆ ಎಂದು ನಾನು ಅಂದುಕೊಂಡಿಲ್ಲ. ರಾಷ್ಟ್ರೀಯವಾದದ ಮೇಲೆ ರಾಜಕಾರಣ ಮಾಡಬೇಕು ಎನ್ನುವ ಉದ್ದೇಶದಿಂದ ಬಂದಿದ್ದೇನೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದರು.

2011ರ ಕರ್ನಾಟಕ ಕೇಡರ್​ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2019ರ ಸೆಪ್ಟೆಂಬರ್​ನಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು. 2020ರ ಆಗಸ್ಟ್​ನಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಸದ್ಯ ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದಾರೆ. ತಮಿಳುನಾಡಿನ ಕರೂರು ಜಿಲ್ಲೆಯ ಕೃಷಿ ಕುಟುಂಬದವರಾದ ಅಣ್ಣಾಮಲೈ, ಮೆಕಾನಿಕಲ್ ಇಂಜಿನಿಯರಿಂಗ್ ಹಾಗೂ ಐಐಎಂ ಲಖನೌನಿಂದ ಎಂಬಿಎ ಪದವಿಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net