

TRB Rajaa: ತಮಿಳುನಾಡು ಮತ್ತು ಉತ್ತರ ಭಾರತದ ಮಹಿಳೆಯರನ್ನು ಪರಸ್ಪರ ಹೋಲಿಕೆ ಮಾಡಿರುವ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್ಬಿ ರಾಜಾ, ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಚೆನ್ನೈನ ಎಥಿರಾಜ್ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಜಾ, ತಮಿಳುನಾಡಿನ ಮಹಿಳೆಯರಿಗೆ ಮತ್ತು ದೇಶದ ಬೇರೆ ರಾಜ್ಯದ ಮಹಿಳೆಯರಿಗೆ ಅಜಗಜಾಂತರ ವ್ಯತ್ಯಾಸವಿದೆ. ಶತಮಾನಗಳ ಹಿಂದಿದ್ದ ಪರಿಸ್ಥಿತಿ, ಉತ್ತರ ಭಾರತದಲ್ಲಿ ಇನ್ನೂ ಜೀವಂತವಿದೆ, ಅಲ್ಲಿನ ಮಹಿಳೆಯರಿಗೆ ನಿಮ್ಮ ಗಂಡಂದಿರು ಎಲ್ಲಿ ಕೆಲಸ ಮಾಡುತ್ತಾರೆ ಎಂದು ಕೇಳಬೇಕು, ಆದರೆ, ನಮ್ಮ ರಾಜ್ಯದಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ ಇಲ್ಲಿನ ಮಹಿಳೆಯರು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತರಾಗಿದ್ದಾರೆ ಎಂದರು.
ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಎಳಂಗೋವನ್, ಉತ್ತರ ಭಾರತದಲ್ಲಿ ಮಹಿಳೆಯರು ಧಾರ್ಮಿಕ ಆಚರಣೆಗಳಿಂದಾಗಿ ಗೃಹಿಣಿಯರಾಗಿ ಮಾತ್ರ ಗುರುತಿಸಿಕೊಂಡಿದ್ದು, ಅವರು ಇನ್ನೂ ಮನುಸ್ಮೃತಿಯನ್ನು ಅನುಸರಿಸುತ್ತಾರೆ, ಆದರೆ, ತಮಿಳುನಾಡು ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಸದಾ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸಚಿವ ರಾಜಾ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು. ಇದೇ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಮತ್ತೊಮ್ಮೆ, ಡಿಎಂಕೆ ತನ್ನ ಮಿತಿ ಮೀರಿ ಉತ್ತರ ಪ್ರದೇಶ, ಬಿಹಾರ ಮತ್ತು ಉತ್ತರ ಭಾರತವನ್ನು ಅವಮಾನಿಸಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಬಿಹಾರವನ್ನು ಬೀಡಿಗೆ ಹೋಲಿಸಿತ್ತು, ಈ ಹಿಂದೆ ಡಿಎಂಕೆ ಬಿಹಾರದ ಜನರು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಹೇಳಿಕೆ ನೀಡಿತ್ತು, ಮತ್ತು ಈಗ ಬಿಹಾರಿ ಮತ್ತು ಯುಪಿ ಮಹಿಳೆಯರಿಗೆ ಈ ಅವಮಾನವಾಗುತ್ತಿದೆ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನಲ್ಲಿ ಉತ್ತರ ಮತ್ತು ದಕ್ಷಿಣ ಚರ್ಚೆ ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ವರ್ಷದ ಮಾರ್ಚ್ನಲ್ಲಿ ತಮಿಳುನಾಡು ಸಚಿವ ದುರೈ ಮುರುಗನ್ ಅವರು ಉತ್ತರ ಭಾರತದ ಸಂಸ್ಕೃತಿಯು ಬಹುಪತ್ನಿತ್ವವನ್ನು ಒಳಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮುರುಗನ್, ನಮ್ಮ ಸಂಸ್ಕೃತಿಯಲ್ಲಿ ಒಬ್ಬ ಪುರುಷ ಒಬ್ಬ ಮಹಿಳೆಯನ್ನು ಮದುವೆಯಾಗುತ್ತಾನೆ. ಆದರೆ ಉತ್ತರ ಭಾರತದಲ್ಲಿ, ಒಬ್ಬ ಮಹಿಳೆ ಐದು ಅಥವಾ ಹತ್ತು ಪುರುಷರನ್ನು ಮದುವೆಯಾಗಬಹುದು. ಅಲ್ಲದೆ, ಐದು ಪುರುಷರು ಒಬ್ಬ ಮಹಿಳೆಯನ್ನು ಮದುವೆಯಾಗಬಹುದು. ಇದು ಅವರ ಸಂಸ್ಕೃತಿ. ಒಬ್ಬರು ಹೋದರೆ, ಇನ್ನೊಬ್ಬರು ಬರುತ್ತಾರೆ ಎಂದು ಹೇಳಿದರು.(ಏಜೆನ್ಸೀಸ್)