

ಚೆನ್ನೈ: ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ವಿ.ಸೆಂಥಿಲ್ ಬಾಲಾಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದು, ಸಚಿವರನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ (ಜೂ. 14) ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಸಚಿವ ಬಾಲಾಜಿ ಗಳಗಳನೇ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಅವರನ್ನು ಇದೀಗ ಇಡಿ ವಿಚಾರಣೆಗೆ ಒಳಪಡಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಮಂಗಳವಾರ (ಜೂ.13) ಬಾಲಾಜಿ ಅವರ ನಿವಾಸದ ಮೇಲೆ ದಾಳಿ ನಡೆಸಿತು. ದಾಳಿಯ ನಂತರ, ಇಡಿ ಬಾಲಾಜಿಯನ್ನು 18 ಗಂಟೆಗಳ ಕಾಲ ವಿಚಾರಣೆಗೆ ಕರೆದೊಯ್ದಿದೆ. ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಬಾಲಾಜಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಈ ವೇಳೆ ಆಸ್ಪತ್ರೆಯ ಹೊರಗಿನ ದೃಶ್ಯವು ನಾಟಕೀಯವಾಗಿತ್ತು. ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತರಲಾದ ಡಿಎಂಕೆ ನಾಯಕ, ವಾಹನದೊಳಗೆ ನೋವಿನಿಂದ ಮಲಗಿ ಅಳುತ್ತಿರುವುದು ಕಂಡುಬಂದಿತು. ಅವರ ಬೆಂಬಲಿಗರು ತನಿಖಾ ಸಂಸ್ಥೆಯ ವಿರುದ್ಧ ಈ ವೇಳೆ ಘೋಷಣೆಗಳನ್ನು ಕೂಗಿದರು.
ಬಾಲಾಜಿ ಅವರನ್ನು ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಡಿಎಂಕೆ ಸಂಸದ ಮತ್ತು ವಕೀಲ ಎನ್.ಆರ್. ಎಲಾಂಗೋ ಮಂಗಳವಾರ ಹೇಳಿದ್ದಾರೆ. ಇಡಿ ಅಧಿಕೃತವಾಗಿ ಸಚಿವರ ಬಂಧನವನ್ನು ದೃಢಪಡಿಸಿಲ್ಲ ಎಂದು ತಿಳಿಸಿದ್ದಾರೆ. ಬಾಲಾಜಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಮಿಳುನಾಡು ಕ್ರೀಡಾ ಸಚಿವ ಮತ್ತು ಡಿಎಂಕೆ ಯುವ ಘಟಕದ ಮುಖ್ಯಸ್ಥ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ನಾವು ಇದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆದರಿಕೆ ರಾಜಕೀಯಕ್ಕೆ ನಾವು ಹೆದರುವುದಿಲ್ಲ ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಬಾಲಾಜಿ ಮೇಲಿನ ಇಡಿ ದಾಳಿಗಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಪಕ್ಷವು ಬೆದರಿಕೆ ರಾಜಕೀಯ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪ ಮಾಡಿದರು.
ಅಂದಹಾಗೆ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಅಧಿಕಾರಿಗಳು ಮಂಗಳವಾರ ಬಾಲಾಜಿ ಅವರ ನಿವಾಸ ಹಾಗೂ ತಮಿಳುನಾಡು ಸಚಿವಾಲಯದ ಅವರ ಕಚೇರಿ ಮತ್ತು ಕರೂರ್ ಜಿಲ್ಲೆಯ ಅವರ ಸಹೋದರ ಮತ್ತು ಆಪ್ತ ಸಹಾಯಕನ ನಿವಾಸಗಳ ಮೇಲೆ ದಾಳಿ ನಡೆಸಿದೆ. (ಏಜೆನ್ಸೀಸ್)