ಪಾಕಿಸ್ತಾನಿ ಯೂಟ್ಯೂಬರ್​ನಿಂದ ಭಾರತ ಪ್ರವಾಸ: ಭಾರತೀಯರ ಆತಿಥ್ಯಕ್ಕೆ ಪಾಕ್​ ವ್ಲಾಗರ್​ ಫಿದಾ!

Pak Youtuber
Published on

ನವದೆಹಲಿ: ಕನ್ನಡದ ಖ್ಯಾತ ಯೂಟ್ಯೂಬರ್​ ಡಾ. ಬ್ರೋ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ನಮಗೆಲ್ಲ ಗೊತ್ತೇ ಇದೆ. ಇತ್ತೀಚೆಗೆ ಕನ್ನಡದ ಮಹಿಳೆಯೊಬ್ಬರು ಸಹ ಪಾಕ್​ಗೆ ಭೇಟಿ ಕೊಟ್ಟಿದ್ದರು. ಇದೀಗ ಪಾಕಿಸ್ತಾನದ ಖ್ಯಾತ ವ್ಲಾಗರ್​ ಅಬ್ರಾರ್​ ಹಸನ್​ ಭಾರತದಲ್ಲಿ ಬೈಕ್​ ಪ್ರವಾಸ ಮಾಡಿದ್ದು, ತಮ್ಮ ಪ್ರಯಾಣದ ಉದ್ದಕ್ಕೂ ಭಾರತೀಯರ ಮನಸ್ಸು ಗೆದ್ದಿದ್ದಾರೆ. ಅಲ್ಲದೆ, ಭಾರತೀಯರ ಆತಿಥ್ಯಕ್ಕೆ ಫಿದಾ ಆಗಿದ್ದಾರೆ.

ಅಬ್ರಾರ್​ ಹಸನ್​ 30 ದಿನಗಳ ಕಾಲ 7 ಸಾವಿರ ಕಿ.ಮೀ ಫ್ರೆಂಡ್​ಶಿಫ್​ ಟೂರ್​ ಮಾಡಿದ್ದಾರೆ. ಈ ಪ್ರವಾಸದ ವೇಳೆ ಉಭಯ ದೇಶಗಳ ನಡುವಿನ ಪ್ರತಿಕೂಲ ಸಂಬಂಧದ ಹೊರತಾಗಿಯೂ, ಭಾರತೀಯರು ತನ್ನನ್ನು ಅಪಾರ ಪ್ರೀತಿಯಿಂದ ಸ್ವೀಕರಿಸಿ, ಗೌರವಿಸಿದ್ದಾರೆ ಎಂದು ಹಸನ್​ ಕಂಡುಕೊಂಡಿದ್ದಾರೆ.

ವೈಲ್ಡ್ ಲೆನ್ಸ್ ಬೈ ಅಬ್ರಾರ್

ಬೈಕರ್ ಹಸನ್​, ದೆಹಲಿ, ಹರಿಯಾಣ, ರಾಜಸ್ಥಾನ, ಮುಂಬೈ, ಕೇರಳ ಸೇರಿದಂತೆ ಭಾರತದ ಹೆಚ್ಚಿನ ನಗರಗಳಲ್ಲಿ ಸಂಚಾರ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ವ್ಲಾಗರ್ ತನ್ನ ಯುಟ್ಯೂಬ್ ಚಾನೆಲ್​, ವೈಲ್ಡ್ ಲೆನ್ಸ್ ಬೈ ಅಬ್ರಾರ್​ನಲ್ಲಿ ಪ್ರಯಾಣದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹಸನ್ ಅವರು BMW ಟ್ರಯಲ್ ಬೈಕ್​ನಲ್ಲಿ ಸವಾರಿ ಮಾಡಿದ್ದಾರೆ. ಹೆಲ್ಮೆಟ್​ನಲ್ಲಿ ಅಳವಡಿಸಲಾದ ಮತ್ತು ಕೈಯಲ್ಲಿ ಹಿಡಿದುಕೊಳ್ಳುವ ವೃತ್ತಿಪರ ಕ್ಯಾಮೆರಾಗಳೊಂದಿಗೆ ತಮ್ಮ ಅದ್ಭುತ ಪ್ರಯಾಣವನ್ನು ಹಸನ್​ ಚಿತ್ರೀಕರಿಸಿದ್ದಾರೆ. ಹಸನ್,​ ಭಾರತದ ಅತಿಥಿ ಎಂದು ಭಾವಿಸಿ ಅನೇಕರು ಅವರ ಊಟದ ಆತಿಥ್ಯ ವಹಿಸಿ ಗೌರವಿಸಿದರು. ಅಲ್ಲದೆ, ಕೆಲ ದೂರ ಹಸನ್​ರೊಂದಿಗೆ ತಮ್ಮ ಸ್ವಂತ ಬೈಕ್‌ಗಳಲ್ಲಿ ಸವಾರಿ ಮಾಡುವ ಮೂಲಕ ಪ್ರೀತಿಯನ್ನು ತೋರಿದ್ದಾರೆ.

ವೀಸಾ ಪಡೆಯಲು ಪರದಾಟ

ಹಸನ್ ಅವರು ಏಪ್ರಿಲ್ 3ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅದಕ್ಕೂ ಮುನ್ನ ವೀಸಾ ಪಡೆಯಲು ವರ್ಷಗಳ ಕಾಲ ಪರದಾಡಿದ್ದಾರೆ. ಅಂತಿಮವಾಗಿ ಹಸನ್​ಗೆ ಭಾರತದಲ್ಲಿ ಭವ್ಯ ಸ್ವಾಗತ ದೊರಕಿದೆ. ಕೇರಳ ಪ್ರವಾಸದಲ್ಲಿ ಹಸನ್ ಅವರು ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಲು ಕಾರಣ ಏನು ಎಂಬುದರ ಬಗ್ಗೆ ಮಾತನಾಡಿದರು. ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಲು ಒಂದು ಕಾರಣವಿದೆ ಮತ್ತು ಕೇರಳದ ಹಿನ್ನೀರು ಬಹುಶಃ ಕೇರಳದ ಅನೇಕ ಅದ್ಭುತ ಸ್ಥಳಗಳಲ್ಲಿ ಒಂದಾಗಿದೆ, ಇದನ್ನು ನೋಡಲೇಬೇಕು ಎಂದು ಹಸನ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನದ ಬಗ್ಗೆಯೂ ಹಸನ್​ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಜರ ನಾಡು ಎಂದೂ ಕರೆಯಲ್ಪಡುವ ರಾಜಸ್ಥಾನ ಭಾರತದ ಅತಿದೊಡ್ಡ ರಾಜ್ಯ ಮತ್ತು ಅತ್ಯಂತ ಆಕರ್ಷಕವಾದ ಸಾಂಸ್ಕೃತಿಕ ನೆಲೆಯಾಗಿದೆ ಎಂದು ಕೊಂಡಾಡಿದ್ದಾರೆ.

ಪಾಕ್​ ಯೂಟ್ಯೂಬರ್​ ಪ್ರವಾಸಕ್ಕೆ ಅನೇಕ ಭಾರತೀಯರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಾಕ್​ ನೆಟ್ಟಿಗರು ಸಹ ಭಾರತೀಯರ ಆತಿಥ್ಯಕ್ಕೆ ಫಿದಾ ಆಗಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net